ಮೇ ತಿಂಗಳು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳ


ನವದೆಹಲಿ,ಏ.೨೪- ಈಗಾಗಲೇ ದೇಶ ಕೊರೊನಾ ಸೋಂಕಿಗೆ ಅಕ್ಷರಶಃ ನಲುಗಿ ಹೋಗಿದೆ. ಸಾವಿನ ಪ್ರಮಾಣವಂತೂ ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೆ ಮೇ ಮಧ್ಯಭಾಗದಲ್ಲಿ ಭಾರತದಲ್ಲಿ ಪ್ರತಿದಿನ ೫,೬೦೦ ಜನರು ಸಾವನ್ನಪ್ಪುತ್ತಾರೆ ಎಂದು ಅಮೆರಿಕ ನಡೆಸಿರುವ ಅಧ್ಯಯನ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಮತ್ತೊಂದೆಡೆ ದೇಶಾದ್ಯಂತ ಲಸಿಕೆ ಅಭಿಯಾನ ಚುರುಕಿನಿಂದ ಸಾಗಿದ್ದು, ಮಾಸ್ಕ್ ಧರಿಸುವುದರಿಂದ ಕನಿಷ್ಟ ೭೦ ಸಾವಿರ ಜನರ ಪ್ರಾಣವನ್ನು ಉಳಿಸಬಹುದಾಗಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.
ಏಪ್ರಿಲ್ ಮತ್ತು ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಸರಿಸುಮಾರು ೩ ಲಕ್ಷ ಜನರು ಕೋವಿಡ್-೧೯ಕ್ಕೆ ಬಲಿಯಾಗುವ ಆತಂಕವಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ವಾಷಿಂಗ್ಟನ್‌ನಲ್ಲಿರುವ ಹೆಲ್ತ್ ಮೆಟ್ರಿಕ್ಸ್ ಮತ್ತು ಇವ್ಯಾಲುಯೇಷನ್ ವಿಶ್ವವಿದ್ಯಾಲಯ ಸಮೀಕ್ಷೆ ನಡೆಸಿ ಏ. ೧೫ ರಂದು ಈ ವರದಿಯನ್ನು ಪ್ರಕಟಿಸಿದೆ. ಆದರೆ, ದೇಶಾದ್ಯಂತ ಲಸಿಕೆ ಅಭಿಯಾನ ಆರಂಭಿಸಿರುವ ಹಿನ್ನೆಲೆಯಲ್ಲಿ ಸೋಂಕು ಇಳಿಮುಖವಾಗುವ ಭರವಸೆ ಮೂಡಿಸಿದೆ ಎಂದು ತಿಳಿಸಿದೆ.
ದೇಶದಲ್ಲಿ ಮುಂಬರುವ ದಿನಗಳಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ಇನ್ನಷ್ಟು ಜಟಿಲವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ ಪ್ರಸ್ತುತ ದಾಖಲಾಗುತ್ತಿರುವ ಸೋಂಕು ಮತ್ತು ಸಾವಿನ ಅಂಕಿ-ಅಂಶಗಳನ್ನು ಪರಾಮರ್ಶೆ ನಡೆಸಿ ಈ ಸಮೀಕ್ಷೆ ನಡೆಸಿದೆ.
ಈ ವರ್ಷ ಮೇ ೧೦ರ ವೇಳೆಗೆ ಪ್ರತಿದಿನ ಸಾವಿನ ಸಂಖ್ಯೆ ೫,೬೦೦ಕ್ಕೆ ಏರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇನ್ನೊಂದು ಸಮೀಕ್ಷೆಯ ಪ್ರಕಾರ ಮಾಸ್ಕ್ ಧರಿಸುವುದರಿಂದ ಏಪ್ರಿಲ್ ಮೂರನೇ ವಾರದ ಅಂತ್ಯದ ವೇಳೆಗೆ ಸೋಂಕಿನ ಪ್ರಮಾಣ ಇಳಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಸೆಪ್ಟೆಂಬರ್೨೦೨೦ ರಿಂದ ೨೦೨೧ರ ಫೆಬ್ರವರಿ ತಿಂಗಳಿನಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಏಪ್ರಿಲ್ ತಿಂಗಳಿನಲ್ಲಿ ಏಕಾಏಕಿ ಕೊರೊನಾ ಸೋಂಕು ತಾರಕಕ್ಕೇರಿದೆ.
ಏಪ್ರಿಲ್ ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಹೊಸ ಸೋಂಕುಗಳ ಪ್ರಮಾಣ ಶೇ. ೭೧ರಷ್ಟು ಏರಿಕೆಯಾಗಿದ್ದು, ಪ್ರತಿದಿನ ಸಾವಿನ ಸಂಖ್ಯೆಯೂ ಶೇ. ೫೫ಕ್ಕೆ ಏರಿಕೆಯಾಗಿದೆ. ಜನರು ಮಾಸ್ಕ್ ಧರಿಸದೆ ನಿರ್ಲಕ್ಷಿಸಿರುವುದು ಹಾಗೂ ಸಾಮೂಹಿಕವಾಗಿ ಜನರು ಗುಂಪು ಸೇರಿದ್ದರಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಲು ಪ್ರಮುಖ ಕಾರಣವಾಗಿದೆ.
ಏಪ್ರಿಲ್ ಮಧ್ಯಭಾಗದಲ್ಲಿ ಐಹೆಚ್‌ಎಂಇ ವಿಶ್ಲೇಷಣೆಯ ಅನುಸಾರ ಏಪ್ರಿಲ್ ಮಧ್ಯದವೇಳೆಗೆ ೫ನೇ ಅತಿದೊಡ್ಡ ಕೊರೊನಾ ಸಾವಿಗೆ ಕಾರಣವಾಗುವ ಅಪಾಯವಿದೆ.
ಪ್ರತಿದಿನ ದೇಶದಲ್ಲಿ ೧,೩೩,೪೦೦ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಇದು ಏಪ್ರಿಲ್ ಮೊದಲ ವಾರಕ್ಕೆ ಹೋಲಿಸಿದರೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ೭೮ ಸಾವಿರ ಸೋಂಕು ಪ್ರಕರಣಗಳು ದಾಖಲಾಗಿದ್ದವು. ಅಂದಾಜಿನ ಪ್ರಕಾರ ೯೭೦ ರಿಂದ ೧೫೦೦ರವರೆಗೆ ಸರಾಸರಿ ಸಾವುಗಳು ಸಂಭವಿಸಿವೆ.
ಅದರಲ್ಲೂ ಪಂಜಾಬ್, ಛತ್ತೀಸ್‌ಘಡ, ಮಹಾರಾಷ್ಟ್ರ ಜಿಲ್ಲೆಗಳಲ್ಲಿ ೧೦ ಲಕ್ಷ ಜನಸಂಖ್ಯೆಯಲ್ಲಿ ಶೇ. ೪ರಷ್ಟು ಮಂದಿಗೆ ಸೋಂಕು ತಗುಲುತ್ತಿದೆ.
ಮತ್ತೊಂದು ಅಮೆರಿಕ ಮೂಲದ ಮಿಚಿಗನ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದ ಪ್ರಕಾರ ಪ್ರತಿದಿನ ೮ ರಿಂದ ೧೦ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಲಿವೆ. ಮೇ ಮಧ್ಯ ಭಾಗದಲ್ಲಿ ೪,೫೦೦ ಮಂದಿ ಕೊರೊನಾಗೆ ಬಲಿಯಾಗಲಿದ್ದಾರೆ ಎಂದು ಡಾ. ಬರ್ಮರ್ ಮುಖರ್ಜಿ ಭವಿಷ್ಯ ನುಡಿದಿದ್ದಾರೆ.