ಮೇ ಅಂತ್ಯದವರೆಗೂ ವಿಶೇಷ ಐಇಸಿ ಅಭಿಯಾನ ಅಡಿ ಕೆಲಸ: ಪ್ರವೀಣಕುಮಾರ ಸಾಲಿ

ವಿಜಯಪುರ,ಮಾ.23:ಜಿಲ್ಲೆಯ ತಿಕೋಟಾ ತಾಲೂಕು ವ್ಯಾಪ್ತಿಯ ಎಲ್ಲ 14 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಜನರು ವಲಸೆ ಹೋಗುವದನ್ನು ತಡೆದು ಸ್ಥಳಿಯವಾಗಿ ಅವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಕುಶಲ ಕೆಲಸ ನೀಡುವ ಉದ್ದೇಶದಿಂದ ಹಾಗೂ ಮಹಾತ್ಮ ಗಾಂದಿ ನರೇಗಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಭಾಗವಹಿಸುವಂತೆ ಪ್ರೇರೆಪಿಸುವ ದೃಷ್ಠಿಯಿಂದ ಮೇ-2024ರ ಅಂತ್ಯದವರೆಗೆ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ “ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ- ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿ” ಎಂಬ ವಿಶೇಷ ಅಭಿಯಾನವನ್ನು ಆಯುಕ್ತರ ನಿರ್ದೇಶನದಂತೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಹೇಳಿದರು.
ಈಗಾಗಲೇ ಗ್ರಾಮೀಣ ಭಾಗದ ಜನರಿಗೆ ಪ್ರತಿ ದಿನ 316 ರೂ ಕೂಲಿ ಜೊತೆಗೆ 100 ದಿನಗಳ ಅಕುಶಲ ಕೆಲಸ ನೀಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯಾವದೇ ಉದ್ಯೋಗ ದೊರೆಯದೇ ಇರುವ ಪ್ರಯುಕ್ತ ಈ ಅವಧಿಯಲ್ಲಿ ಅವರಿಗೆ ನಿರಂತರವಾಗಿ ಕೆಲಸ ನೀಡುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಭಾಗವಾಗಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗ್ರಾಮೀಣ ಪ್ರದೇಶದಲ್ಲಿ ಮನೆ-ಮನೆಗೆ ಭೇಟಿ ನೀಡಿ ನರೇಗಾ ಮಾಹಿತಿ ನೀಡುವದರ ಜೊತೆಗೆ ನಮೂನೆ-06ರಲ್ಲಿ ಕೆಲಸಕ್ಕೆ ಬೇಡಿಕೆ ಪಡೆಯುತ್ತಿದ್ದಾರೆ. ಹೀಗೆ ಬೇಡಿಕೆ ಸಂಗ್ರಹಿಸಿದ ಕೂಲಿಕಾರರರಿಗೆ ಎಪ್ರಿಲ್ 01 ರಿಂದ ಅಕುಶಲ ಕೆಲಸ ನೀಡಲಾಗುತ್ತದೆ. ಈಕುರಿತು ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಮಹಾತ್ಮ ಗಾಂಧಿ ನರೇಗಾ ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ತಾಲೂಕಿನ ಪ್ರತಿ ಗ್ರಾಮದಲ್ಲಿ ಕೂಲಿ ಆಧಾರಿತ ಸಮುದಾಯ ಕಾಮಗಾರಿಗಳನ್ನು ಆರಂಭಿಸಿ, ಕೆಲಸ ಬಯಸುವ ಪ್ರತಿ ವ್ಯಕ್ತಿಗೂ ಉದ್ಯೋಗ ಕಲ್ಪಿಸಲಾಗುತ್ತದೆ. ವಿಶೇಷಚೇತನರು, ಮಹಿಳೆಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗಗಳಿಗೆ ಆದ್ಯತೆ ಮೇಲೆ ಕೆಲಸ ನೀಡಲಾಗುತ್ತಿದೆ. ಜೊತೆಗೆ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 1800 4258 666 ಅಥವಾ 94808 31699ಗೆ ಸಂಪರ್ಕಿಸಲು ಅಥವಾ ಹತ್ತಿರದ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಬಹುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.