ಮೇವು ಸಂಗ್ರಹದತ್ತ ರೈತರ ಚಿತ್ತ

ಕಲಬುರಗಿ ಏ 18: ಅನ್ನದಾತರು ಒಂದು ವರ್ಷ ಜಾನುವಾರುಗಳಿಗೆ ಮೇವಿನ ಕೊರತೆ ಕಾಡದಿರಲಿ ಎಂದು ಸುಗ್ಗಿ ಮುಕ್ತಾಯದ ಕೊನೆಯಲ್ಲಿ ಹೊಟ್ಟು, ಮೇವು ಸಂಗ್ರಹಣೆ ಮಾಡುತ್ತಾರೆ.ಹೆಚ್ಚಿನ ಸಂಖ್ಯೆಯಲ್ಲಿ ರೈತರು ಶೇಂಗಾ ಹೊಟ್ಟು, ಅದರಲ್ಲೂ ಹೆಚ್ಚಾಗಿ ಜೋಳದ ಒಣದಂಟು ( ಕಣಕಿ) ಬಣಮೆ(ಬಣಮಿ) ಹಾಕುವರು. ಈಗ ಎಲ್ಲ ಕಡೆಗೂ ಕಣಕಿಯ ಬಣವೆಗಳು ಜಮೀನುಗಳಲ್ಲಿ, ತೋಟಗಳಲ್ಲಿ ಮತ್ತು ಗ್ರಾಮದ ಹೊರವಲಯಗಳಲ್ಲಿ ಕಂಡುಬರುತ್ತಿವೆ.
ನಮ್ಮ ರೈತರಲ್ಲಿ ದೊಡ್ಡ ದೊಡ್ಡ ಸ್ಟೋರೇಜುಗಳಿಲ್ಲ. ಕಾರಣ ಮೇವು ಸಂಗ್ರಹಕ್ಕೆ ಬಣಮೆಗೆ ಮೊರೆ ಹೋಗುವರು. ಬಣಮಿ(ಮೆ) ಒಟ್ಟುವುದಕ್ಕೂ ನಮ್ಮ ರೈತರು ಮೂಹೂರ್ತ ನೋಡಿ ಆ ದಿನವೇ ಪ್ರಾರಂಭಿಸುವರು ಬಣಮೆ ಒಟ್ಟುವುದರಲ್ಲೇ ಕೆಲವು ಪರಿಣಿತರಿರುತ್ತಾರೆ. ಅವರೇ ತ್ರಿಭುಜಾಕಾರದಲ್ಲಿ ಬಣಮಿ ಹಾಕುವರು. ನಂತರ ಮಣ್ಣಿನ ದೊಡ್ಡಹೆಳ್ಳಿಯಿಂದ ಮುಚ್ಚಿ ಮುಳ್ಳು ಹಚ್ಚುವರು.ದನಕರುಗಳಿಂದ ಮಳೆ ಗಾಳಿ ಬಿಸಿಲಿನಿಂದ ನಮ್ಮ ರೈತರು ಹೀಗೆ ಮೇವು ಸಂರಕ್ಷಿಸಿಡುವರು.ನಮ್ಮ ಭಾಗದಲ್ಲಿ ಇನ್ನೂ ಎತ್ತುಗಳಿಂದ ಉಳುಮೆ ಮಾಡುವ ಪದ್ಧತಿ ಜೀವಂತವಾಗಿಸಿದ್ದಾರೆ. ಅಷ್ಟೇ ಅಲ್ಲದೇ ಎಮ್ಮೆ ಕುರಿ ಆಡು ಹೈನುಗಾರಿಕೆಗೆ ಮೇವು ಅವಲಂಬಿತವಾಗಿದೆ. ಬೇಸಿಗೆ ಬಂತೆಂದರೆ ಜಮೀನಿನಲ್ಲಿ ದನಕರುಗಳನ್ನು ಮೇಯಿಸಲು ಏನು ಮೇವು ಸಿಗದೆ ಭೂಮಿ ಬರಡಾಗಿರುತ್ತದೆ.ಆದರೆ ಈಗ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಾಣಿಜ್ಯ ಬೆಳೆಗಳ ಕಡೆ ಮುಖ ಮಾಡಿದ ಪರಿಣಾಮಗಳು ಮೇವು ಸಂಗ್ರಹಣೆಗೆ ಕೊರತೆ ಕಾಣುತ್ತಿದೆ.
ಜಿ.ಕೆ.ಪಟ್ಟಣಶೆಟ್ಟಿ