ಮೇವು ನುಂಗಿದ ವಾಣಿಜ್ಯ ಬೆಳೆಗಳು ಜಾನುವಾರುಗಳ ಮೂಕರೋಧನೆ

ವಾಣಿಜ್ಯ ಬೆಳೆಯಿಂದ ಕುಸಿದ ಮೇವು, ಶೇಂಗಾ, ಜೋಳದ ಸೊಪ್ಪೆಗೆ ಭಾರಿಬೇಡಿಕೆ
ದೇವದುರ್ಗ,ಮಾ.೧೬- ತಾಲೂಕಿನ ಬಹುತೇಕ ಕೃಷಿ ಭೂಮಿ ನೀರಾವರಿಗೆ ಒಳಪಟ್ಟರೂ ಬೇಸಿಗೆಯಲ್ಲಿ ಜಾನುವಾರುಗಳು ಮೇವಿಗಾಗಿ ಅಲೆದಾಡುತ್ತಿವೆ. ರೈತರು ವಾಣಿಜ್ಯ ಬೆಳೆಗಳಿಗೆ ಮೊರೆ ಹೋಗಿದ್ದರಿಂದ ಮೇವಿನ ಕೊರತೆಯಾಗಿದೆ. ನೀರಾವರಿ ಆಶ್ರಿತ ರೈತರು ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆಯುತ್ತಿದ್ದು ಕೊರತೆಗೆ ಮುಖ್ಯಕಾರಣವಾಗಿದೆ.
ವಾಣಿಜ್ಯ ಬೆಳೆಗಳಾದ ಮೆಣಸಿನಕಾಯಿ ಹಾಗೂ ಹತ್ತಿಗೆ ಮೇವಿನ ಉಪಉತ್ಪನ್ನವಿಲ್ಲ. ತೊಗರಿ ಬೆಳೆಗೆ ಹೊಟ್ಟು ಬಂದರೂ ಸಂಗ್ರಹಕ್ಕೆ ಯೋಗ್ಯವಲ್ಲ. ಭತ್ತವನ್ನು ಬಹತೇಕ ಯಂತ್ರದ ಮೂಲಕ ಕಟಾವು ಮಾಡುತ್ತಿದ್ದು ಅರ್ಧಹುಲ್ಲು ನೆಲಕ್ಕೆ ಬಿದ್ದರೆ ಇನ್ನರ್ಥ ಕೈಗೆಸಿಗುತ್ತದೆ. ಗದ್ದೆ ಹಸಿಯಿದ್ದರೆ ಶೇ.೭೦ ಮೇವು ಹಾಳಾಗುತ್ತದೆ. ಎತ್ತು ಸಾಕಿದ ರೈತರು ಮಾತ್ರ ಹುಲ್ಲು ಸಂಗ್ರಹಿಸಿದರೆ, ಉಳಿದವರು ಹೊಲಸ್ವಚ್ಛ ಮಾಡಲು ಹುಲ್ಲಿಗೆ ಬೆಂಕಿ ಹಾಕುತ್ತಾರೆ.
ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ಬಹುತೇಕ ರೈತರು ವಾಣಿಜ್ಯ ಬೆಳೆಗೆ ಮೊರೆ ಹೋಗಿದ್ದು, ಜೋಳ, ಸಜ್ಜೆ, ಶೇಂಗಾ, ಕಡಲೆ ಬೆಳೆ ಕ್ಷೀಣಿಸಿವೆ. ಮಳೆ, ಚಳಿಗಾಲದಲ್ಲಿ ಬಯಲು ಪ್ರದೇಶ, ಗುಡ್ಡಗಾಡು, ಹೊಲದ ಬದುವಿನ ಮೇವು ಜಾನುವಾರುಗಳಿಗೆ ಆಸರೆ. ಬೇಸಿಗೆ ಬಂದರೆ ಎಲ್ಲವೂ ಒಣಗಿ ಬಣಗುಡುತ್ತಿದ್ದು, ಜಮೀನಿನಿಂದ ಜಮೀನಿಗೆ ಮೇವಿಗಾಗಿ ಅಲೆಯುವಂತಾಗಿದೆ.
ಎತ್ತು, ಆಕಳು, ಎಮ್ಮೆಗಳಿಗೆ ಮೇವು ಸಂಗ್ರಹಿಸಿವುದು ಮಾಲೀಕರಿಗೆ ತಲೆನೋವಾಗಿದೆ. ಒಂದುಟ್ರಿಪ್ ಟ್ಯಾಕ್ಟರ್ ಹುಲ್ಲುಗೆ ೧೨-೧೫ಸಾವಿರ ರೂ. ಖರ್ಚು, ಜೋಳ, ಶೇಂಗಾ ಸೊಪ್ಪಗೆ ೧೦-೧೨ಸಾವಿರ ರೂ. ಖರ್ಚು ಬರುತ್ತದೆ. ಯಂತ್ರದಿಂದ ಭತ್ತ ಕೊಯ್ಯುತ್ತಿದ್ದು ಹೊಲದ ತುಂಬೆಲ್ಲ ಬೇವು ಬೀಳುತ್ತಿದ್ದು, ಸಂಗ್ರಹಿಸುವುದು ಕಷ್ಟದ ಕೆಲಸ. ಹೀಗಾಗಿ ರೈತರು ಕೂಲಿಕಾರರಿಂದ ಮೇವುತರುವ ಸ್ಥಿತಿಯಿದೆ.
ಮೇಕೆಗಳಿಗೆ ಸಮಸ್ಯೆ
ಒಂದೆರಡು ಜಾನುವಾರು ಸಾಕಿದ ಮಾಲೀಕರು ಹಣಕೊಟ್ಟು ಭತ್ತದಹುಲ್ಲು, ಜೋಳದಸೊಪ್ಪೆ, ಶೇಂಗಾ ಹೊಟ್ಟು ತರಿಸಿಕೊಂಡರೆ ಬೇಸಿಗೆ ಕಳೆಯಬಹುದು. ಆದರೆ, ನೂರಾರು ಕುರಿ, ಆಡು ಸಾಕಿದ ಮಾಲೀಕರು ಬೇಸಿಗೆಯಲ್ಲಿ ಮೇವಿಗಾಗಿ ಅಕ್ಷರಶಃ ಅಲೆಯುವಂತಾಗಿದೆ. ಕೆಲವರು ಭತ್ತದ ಹುಲ್ಲಿಗೆ ಬೆಂಕಿಹಚ್ಚುತ್ತಿದ್ದು, ಮೇವಿಗಾಗಿ ಕುರಿಗಳು, ಆಡು ಹೊಲದಿಂದ ಹೊಲಕ್ಕೆ ಅಲೆಯುತ್ತಿವೆ. ನೂರಾರು ಕುರಿ ಸಾಕಿದವರು ಮೇವು ಸಂಗ್ರಹಿಸುವುದು ಕಷ್ಟಸಾಧ್ಯ. ಹೀಗಾಗಿ ಊರಿನಿಂದ ಊರಿಗೆ ಅಲೆಯುವ ಸ್ಥಿತಿಯಿದೆ. ದಿನೇದಿನೆ ಮೇವಿನ ಬೆಲೆ ಕೂಡ ಹೆಚ್ಚುತ್ತಿರುವುದು ಕುರಿ ಸಾಕುವುದು ಕಷ್ಟದ ಕೆಲಸವಾಗಿದೆ.
ಕೊರತೆಗೆ ಹಲವು ಕಾರಣ
ಒಂದು ಕಾಲದಲ್ಲಿ ಜಾನುವಾರುಗಳ ತವರು ಎಂದು ಪ್ರಶಸ್ತಿಯಾಗಿದ್ದ ತಾಲೂಕಿನಲ್ಲಿ ಶೇಂಗಾ, ಜೋಳ, ಸಜ್ಜೆ, ಕಡಲೆ, ಭತ್ತ ಹೆಚ್ಚಾಗಿ ಬೆಳೆಯುತ್ತಿದ್ದು ವರ್ಷವಿಡಿ ಮೇವು ಸಿಗುತ್ತಿತ್ತು. ನಾರಾಯಣಪುರ ಬಲದಂಡೆ ನಾಲೆ ಬಂದ ನಂತರ ವಾಣಿಜ್ಯ ಬೆಳೆಗಳು ರೈತರ ಜಮೀನಿಗೆ ಲಗ್ಗೆಹಾಕಿವೆ. ಜೋಳ, ಸಜ್ಜೆ, ಶೇಂಗಾ ಜಾಗವನ್ನು ವಾಣಿಜ್ಯ ಬೆಳೆಗಳಾದ ಹತ್ತಿ, ಮೆಣಸಿನಕಾಯಿ, ಭತ್ತ, ತೊಗರಿ ನುಂಗಿವೆ. ಇದರಿಂದ ಮೇವಿನ ಕೊರತೆಯಾಗಿ ಮೇವು ಸಿಗದೆ ಜಾನುವಾರುಗಳ ಸಂಖ್ಯೆಕುಸಿದಿವೆ. ಜೋಳ, ಸಜ್ಜೆ, ಶೇಂಗಾ, ಕಡಲೆ, ತೊಗರಿಯಿಂದ ಉಪಉತ್ಪನ್ನವಾಗಿ ಸಪ್ಪೆ, ಶೇಂಗಾಹೊಟ್ಟು, ಕಡಲೆ ತೈಡು, ತೊಗರಿಹಿಂಡಿ ಸಿಗುತ್ತಿತ್ತು. ಆದರೆ, ಮೆಣಸಿನಕಾಯಿ, ಹತ್ತಿಯಿಂದ ಯಾವುದೇ ಉಪಉತ್ಪನ್ನ ಸಿಗಲ್ಲ. ಶೇ.೭೦ ಭೂಮಿ ಮೆಣಸಿನಕಾಯಿ, ಹತ್ತಿ, ಭತ್ತ ನುಂಗಿವೆ. ಭತ್ತದ ಹುಲ್ಲು ಸಿಗುತ್ತಿದ್ದರೂ ಬಹುತೇಕರು ಯಂತ್ರದಿಂದ ಕೊಯ್ಯಿಸುವುದರಿಂದ ಅರ್ಧಹುಲ್ಲು ಕೈಗೆಬಂದರೆ, ಇನ್ನರ್ಧ ನೆಲದಪಾಲಾಗಿ ಕೊಳೆಯುತ್ತದೆ. ಇಲ್ಲವೆ ಬೆಂಕಿಗೆ ಆಹುತಿಯಾಗುತ್ತಿದೆ. ಇದರಿಂದ ಬೇಸಿಗೆ ಮುನ್ನವೇ ರೈತರ ಜಮೀನುಗಳು ಹುಲ್ಲು ಕಡ್ಡಿ ಇಲ್ಲದೆ ಬಣಗುಡುತ್ತಿವೆ.

ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ. ಬಹುತೇಕ ನೀರಾವರಿ ಪ್ರದೇಶವಿರುವ ಕಾರಣ ಭತ್ತದ ಹುಲ್ಲು ಸಾಕಷ್ಟು ಇದೆ. ರೈತರು ಮನವಿ ಮಾಡಿದರೂ ಮೇವು ಸಂಗ್ರಹ ಕೇಂದ್ರ ತೆರೆಯಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ರೈತರು ಭತ್ತದ ಹುಲ್ಲಿಗೆ ಬೆಂಕಿಹಚ್ಚದೆ, ಜಾನುವಾರು ಮೇಯಲು ಬಿಡಬೇಕು.
ಶ್ರೀನಿವಾಸ್ ಚಾಪೇಲ್
ತಹಸೀಲ್ದಾರ್

ಬೇಸಿಗೆ ಮೂರು ತಿಂಗಳು ಕುರಿ ಸಾಕುವುದು ಕಷ್ಟದ ಕೆಲಸ. ರೈತರು ಹತ್ತಿ, ಮೆಣಸಿನಕಾಯಿ, ತೊಗರಿ ಹೆಚ್ಚಾಗಿ ಬೆಳೆಯುತ್ತಿರುವ ಕಾರಣ ಮೇವು ಸಿಗುತ್ತಿಲ್ಲ. ಭತ್ತ ಬೆಳೆದರೂ ಯಂತ್ರದಿಂದ ಕೊಯುತ್ತಿದ್ದು, ಹುಲ್ಲು ಸರಿಯಾಗಿ ಬರಲ್ಲ. ಕೆಲವರು ಹುಲ್ಲು ಸುಡುತ್ತಿದ್ದು, ಕುರಿಗಳಿಗೆ ಸಮಸ್ಯೆಯಾಗಿದೆ. ಮೇವನ್ನೂ ಹಣಕೊಟ್ಟು ಖರೀದಿ ಮಾಡುವ ಸ್ಥಿತಿಬಂದಿದೆ.
ಉಮಾಪತಿಗೌಡ
ನಗರಗುಂಡದ ರೈತ