ಮೇವು ತಯಾರಿಕೆ ಕುರಿತು ತರಬೇತಿ


ಬಾದಾಮಿ,ಮಾ.24:ರೈತರು ಒಣ ಮೇವು ಸಂಗ್ರಹಿಸುವಾಗ ಬಹಳಷ್ಟು ಉಪಯೋಗಕ್ಕೆ ಬಾರದಂತಾಗುತ್ತದೆ. ಇದನ್ನು ತಡೆಯಲು ಒಣ ಮತ್ತು ಹಸಿ ಮೇವನ್ನು ಬಹಳ ದಿನಗಳವರೆಗೆ ಸಂಗ್ರಹಿಸಿ ಇಡಬಹುದು ಎಂದು ಬಾಗಲಕೋಟ ಜಿಲ್ಲೆಯ ಆತ್ಮ ಯೋಜನೆಯ ಉಪನಿರ್ದೇಶಕ ಡಾ.ಮಂಜುನಾಥ ಭರಮಗೌಡ್ರ ಹೇಳಿದರು.
ಅವರು ಮಂಗಳವಾರ ಜಿ.ಪಂ, ಕೃಷಿ ಇಲಾಖೆ, ಪಶು ವೈದ್ಯಾಧಿಕಾರಿಗಳ ಸಹಯೋಗದಲ್ಲಿ ತಾಲೂಕಿನ ಹೊಸೂರ ಗ್ರಾಮದ ವಿಜಯಲಕ್ಷ್ಮೀ ಲಿಂಗರಡ್ಡಿ ಕುರ್ತಕೋಟಿ ಅವರ ಜಮೀನಿನಲ್ಲಿ ಆತ್ಮ ಯೋಜನೆಯಡಿ 2020-21 ನೇ ಸಾಲಿನ ಜಿಲ್ಲೆಯ ಒಳಗಿನ ತರಬೇತಿ ಘಟಕದಡಿ ಒಣಮೇವು ಪೌಷ್ಟೀಕರಣ ಹಾಗೂ ರಸಮೇವು ತಯಾರಿಕೆ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ರಸಮೇವನ್ನು ವರ್ಷ ಪೂರ್ತಿಪೌಷ್ಟಿಕಾಂಶಯುಕ್ತ ಮೇವು ನಿರಂತರ ಲಭ್ಯವಾಗುತ್ತದೆ. ಪೂರ್ವ ಸಿದ್ದತೆ ಪೌಷ್ಠಿಕಾಂಶಗಳಿಂದ ಕೂಡಿರುವುದರಿಂದ ಮೇವು ಸುಲಭವಾಗಿ ಜೀರ್ಣವಾಗುತ್ತದೆ. ರಸಮೇವು ತುಂಬಾ ಮೃದು ಮತ್ತು ರುಚಿಕರವಾಗಿರುತ್ತದೆ. ರಸಮೇವು ನೀಡುವುದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪಾದನೆ(ಹಾಲು ಮೌಂಸ) ಮಾಡಬಹುದು ಎಂದು ಒಣ ಮೇವು ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಕಟಗೇರಿ ಮಾತನಾಡಿ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ಮೇವು ಕೊರೆಯುವ ಮಷಿನ್, ನೇಗಿಲು, ಸೇರಿದಂತೆ ಕೃಷಿ ಉಪಕರಣಗಳು, ರಿಯಾಯ್ತಿ ದರದಲ್ಲಿ ಬೀಜ ವಿತರಣೆ ಮತ್ತು ಪಿ.ಎಂ.ಕಿಸಾನ್ ಯೋಜನೆಯಡಿ ವಾರ್ಷಿಕ ರೂ.10 ಸಾವಿರ ಹಣ ಜಮಾ ಮಾಡಲಾಗುತ್ತಿದೆ. ರೈತರು ಆಧಾರ ಕಾರ್ಡ ಲಿಂಕ್ ಮಾಡಿಸಬೇಕು, ಬೆಳೆ ವಿಮೆ ಮಾಡಿಸಬೇಕು ಇಲಾಖೆಯ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಹೊಸೂರ ಪಶುವೈದ್ಯಾಧಿಕಾರಿ ಡಾ.ಐ.ಆರ್.ಗುಡೂರ ಮಾತನಾಡಿ ಜಾನುವಾರುಗಳಲ್ಲಿ ಬರುವ ರೋಗಗಳು ಮತ್ತು ಅವುಗಳ ನಿಯಂತ್ರಣಕ್ಕೆ ಯಾವ ರೀತಿ ಪೂರ್ವಭಾವಿಯಾಗಿ ಲಸಿಕೆ ಹಾಕಿಸಬೇಕು ಎಂದು ರೈತರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಆತ್ಮ ಯೋಜನೆಯ ಪ್ರಾತ್ಯಕ್ಷಿಕೆಗಳನ್ನು ಪ್ರಾಯೋಗಿಕವಾಗಿ ರೈತರಿಗೆ ಮನವರಿಕೆ ಮಾಡಲಾಯಿತು. ವೇದಿಕೆಯ ಮೇಲೆ ಹೊಸೂರ ಗ್ರಾಮದ ಪ್ರಗತಿಪರ ರೈತ ರೇವಣಯ್ಯ ಜೋತೆಪ್ಪನ್ನವರ ಹಾಜರಿದ್ದರು. ಆತ್ಮ ಯೋಜನೆಯ ತಾಲೂಕಾ ತಾಂತ್ರಿಕ ವ್ಯವಸ್ಥಾಪಕ ಐ.ಎನ್.ಕೆಂಗಾರ ಒಣ ಮೇವು ಪೌಷ್ಟಿಕರಣ ಹಾಗೂ ಹಸಿ ಮೇವು ತಯಾರಿಕೆ ಕುರಿತು ಪ್ರಾಸ್ಥಾವಿಕವಾಗಿ ಮಾತನಾಡಿದರು. ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಸ್.ಆರ್.ಗೌಡರ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸುತ್ತಮುತ್ತಲಿನ ಗ್ರಾಮಗಳು ರೈತರು ಭಾಗವಹಿಸಿದ್ದರು.