ಮೇಲ್ಮನೆ ಸಮರಕ್ಕೆ ಅಖಾಡ ಸಿದ್ಧ

ಬೆಂಗಳೂರು,ನ.೧೬- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ೨೫ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಇಂದಿನಿಂದ ಆರಂಭವಾಗಿರುವಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳೂ ಸೇರಿದಂತೆ ಮೂರು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ತಲಾಶ್‌ನಲ್ಲಿದ್ದು, ಇನ್ನೆರೆಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ ರೂಪ ದೊರೆಯಲಿದೆ.
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ನೇತೃತ್ವದಲ್ಲಿ ಕಳೆದವಾರ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು.
ಪ್ರತಿ ಕ್ಷೇತ್ರಕ್ಕೂ ಇಬ್ಬರು ಮೂವರ ಹೆಸರನ್ನು ಅಂತಿಮಗೊಳಿಸಲಾಗಿತ್ತು, ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿದ್ದು, ಪಕ್ಷದ ಹೈಕಮಾಂಡ್‌ನ ಒಪ್ಪಿಗೆ ಪಡೆದು ಇನ್ನೆರೆಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ.
ಬಿಜೆಪಿಯ ಹಾಲಿ ಸದಸ್ಯರೆಲ್ಲರಿಗೂ ಟಿಕೆಟ್ ಸಿಗುವ ಸಾಧ್ಯತೆ ಇದ್ದು, ೨೦ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಹಾಲಿ ಸದಸ್ಯರುಗಳಾದ ಬೆಳಗಾವಿ ಕ್ಷೇತ್ರದ ಮಹಂತೇಶ ಕವಟಗಿ ಮಠ, ಧಾರವಾಟ ಪ್ರದೀಪ್ ಶೆಟ್ಟರ್, ದಕ್ಷಿಣ ಕನ್ನಡ ಕ್ಷೇತ್ರದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರಿನ ಎಂ.ಕೆ ಪ್ರಾಣೇಶ್ ಇವರುಗಳಿಗೆ ಮತ್ತೆ ಟಿಕೆಟ್ ನೀಡುವುದು ಬಹುತೇಕ ಖಚಿತ.
ಕೊಡಗಿನಿಂದ ಬಿಜೆಪಿ ಟಿಕೆಟ್ ಮೇಲೆ ಆಯ್ಕೆಯಾಗಿರುವ ಶಾಸಕ ಅಪ್ಪಚ್ಚು ರಂಜನ್ ಅವರ ಸಹೋದರ ಸುನಿಲ್ ಸುಬ್ರಮಣ್ಯ ಬದಲು ಸುಜಾ ಕುಶಾಲಪ್ಪ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಉಳಿದ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ತಲಾಶ್ ನಡೆದಿದ್ದು, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕಾರಣ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಪಕ್ಷದಲ್ಲಿ ಸಮಾಲೋಚನೆಗಳು ನಡೆದಿವೆ.
ಕಾಂಗ್ರೆಸ್‌ನಲ್ಲೂ ಬಿರುಸಿನ ಚಟುವಟಿಕೆ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್‌ನಲ್ಲೂ ಚಟುವಟಿಕೆಗಳು ಬಿರುಸಾಗಿದ್ದು, ಕಳೆದ ಭಾನುವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ ಪಕ್ಷದ ಪ್ರಮುಖ ಮುಖಂಡರು ಸಭೆ ಸೇರಿ ಆಯ್ಕೆ ಬಗ್ಗೆ ಚರ್ಚಿಸಲಾಯಿತು. ನಿನ್ನೆ ಸಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವರುಗಳು ಮುಖಂಡರ ಸರಣಿ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿ ತಯಾರಿಕೆಯ ಕಸರತ್ತನ್ನು ನಡೆಸಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಕಾಂಗ್ರೆಸ್‌ನಿಂದ ೧೩ ಸದಸ್ಯರುಗಳು ಆಯ್ಕೆಯಾಗಿದ್ದು, ಇವರ ಪೈಕಿ ಕೆಲವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.
ಬೀದರ್‌ನಿಂದ ಗೆದ್ದಿರುವ ವಿಜಯ್‌ಸಿಂಗ್, ಉತ್ತರ ಕನ್ನಡದ ಎಸ್.ಎಲ್. ಗೋಟ್ನೇಕರ್, ಚಿತ್ರದುರ್ಗದ ರಘು ಆಚಾರ್,ಬೆಂಗಳೂರಿನ ನಾರಾಯಣಸ್ವಾಮಿ, ಹಾಸನದ ಎಂ.ಎ ಗೋಪಾಲಸ್ವಾಮಿ ಇವರುಗಳು ಸ್ಪರ್ಧಿಸಲು ಬಯಸುತ್ತಿಲ್ಲ. ಜೆಡಿಎಸ್‌ನಿಂದ ಮೈಸೂರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದ ಸಂದೇಶ್ ನಾಗರಾಜ್, ಕೋಲಾರದಿಂದ ಆಯ್ಕೆಯಾಗಿದ್ದ ಸಿ.ಆರ್. ಮನೋಹರ್ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಹಾಗೆಯೇ ತುಮಕೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಎಂಎಲ್ ಕಾಂತರಾಜ್ ಈಗ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದು, ಅವರು ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ, ಅವರೂ ಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿಲ್ಲ ಎಂದು ಹೇಳಲಾಗಿದೆ.
ಜೆಡಿಎಸ್ ಪಕ್ಷ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಸ್ಪರ್ಧಿಸಲು ಬಯಸಿದ್ದು, ಮೈಸೂರಿನ ಎರಡೂ ಕ್ಷೇತ್ರದ ಪೈಕಿ ಒಂದು ಕ್ಷೇತ್ರದಲ್ಲಿ ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ನಿಲ್ಲಿಸುವ ಸಾಧ್ಯತೆಗಳಿವೆ.
ಹಾಸನದಿಂದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಸ್ಥರೇ ಸ್ಪರ್ಧೆಗಿಳಿಯುವ ಸಾಧ್ಯತೆಗಳಿದ್ದು, ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಇಲ್ಲವೇ ಇವರ ಹಿರಿಯ ಪುತ್ರ ಡಾ. ಸೂರಜ್ ರೇವಣ್ಣ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಉಳಿದಂತೆ ಮಂಡ್ಯದ ಹಾಲಿ ಸದಸ್ಯ ಡಾ. ಅಪ್ಪಾಜಿಗೌಡ ಅಭ್ಯರ್ಥಿಯಾಗುವುದು ಖಚಿತವಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಸಹ ಬಲಾಢ್ಯ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ. ಇನ್ನೆರೆಡು ಮೂರು ದಿನಗಳಲ್ಲಿ ಮೂರೂ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ.