ಮೇಲ್ಮನೆ ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಕಣ್ಣು

ಬೆಂಗಳೂರು,ನ.೧೩- ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಆಡಳಿತಾರೂಢ ಬಿಜೆಪಿ ಜತೆ ಕೈಜೋಡಿಸಲು ಮುಂದಾಗಿದೆ. ಜೆಡಿಎಸ್ ಬೆಂಬಲ ಪಡೆದು ಮೇಲ್ಮನೆಯ ಸಭಾಪತಿ ಸ್ಥಾನವನ್ನು ಧಕ್ಕಿಸಿಕೊಳ್ಳುವ ರಾಜಕೀಯ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ.
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ೪ ಕ್ಷೇತ್ರಗಳಲ್ಲೂ ದಿಗ್ವಿಜಯ ಸಾಧಿಸಿ ಪರಿಷತ್‌ನಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿದ್ದು, ಜೆಡಿಎಸ್ ಸಖ್ಯ ಬೆಳೆಸಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರನ್ನು ಕೆಳಗಿಳಿಸಿ ಬಿಜೆಪಿ ಅವರನ್ನು ಸಭಾಪತಿ ಹುದ್ದೆಯಲ್ಲಿ ಕೂರಿಸುವ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ ಈ ೪ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದು, ವಿಧಾನ ಪರಿಷತ್‌ನಲ್ಲಿ ಅತಿ ದೊಡ್ಡ ಪಕ್ಷವಾಗಿದೆ.
ವಿಧಾನ ಪರಿಷತ್ತಿನಲ್ಲಿ ಒಟ್ಟು ೭೫ ಸದಸ್ಯ ಬಲವಿದ್ದು, ಬಿಜೆಪಿ ೩೧, ಕಾಂಗ್ರೆಸ್ ೨೮, ಜೆಡಿಎಸ್ ೧೪, ಪಕ್ಷೇತರ ೧, ಸಭಾಪತಿ ೧ ಸದಸ್ಯರಿದ್ದಾರೆ. ಸರಳ ಬಹುಮತಕ್ಕೆ ೩೮ ಸದಸ್ಯರ ಬೆಂಬಲ ಅಗತ್ಯವಿದ್ದು, ಬಿಜೆಪಿ ಜೆಡಿಎಸ್ ಒಂದಾದರೆ ಸಭಾಪತಿ ಅವರನ್ನು ಕೆಳಗಿಳಿಸಿ ಬಿಜೆಪಿ ಪಕ್ಷದವರು ಸಭಾಪತಿ ಆಗಬಹುದು.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯಾದ ಒಪ್ಪಂದದಂತೆ ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ, ಸಭಾಪತಿಯಾಗಿ ಜೆಡಿಎಸ್‌ನ ಎಸ್.ಎಲ್ ಧರ್ಮೇಗೌಡ ಉಪಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಜೆಡಿಎಸ್ ಬಿಜೆಪಿ ಜತೆ ಕೈ ಜೋಡಿಸಿದರೆ ಜೆಡಿಎಸ್‌ನ ಉಪಸಭಾಪತಿ ಧರ್ಮೇಗೌಡ ಅವರು ಯಥಾಸ್ಥಿತಿಯಲ್ಲಿ ಮಂದುವರೆಯಲಿದ್ದಾರೆ.
ಬಿಜೆಪಿ ಸಭಾಪತಿ ಸ್ಥಾನವನ್ನು ಧಕ್ಕಿಸಿಕೊಳ್ಳುವ ಸಂಬಂಧ ಜೆಡಿಎಸ್ ನಾಯಕರ ಜತೆ ಚರ್ಚಿಸಿದ್ದು, ಮುಂದಿನ ವಿಧಾನ ಮಂಡಲ ಅಧೀವೇಶನ ಸಂದರ್ಭದಲ್ಲಿ ಈಗಿನ ಸಭಾಪತಿ ಅವರನ್ನು ಕೆಳಗಿಳಿಸುವ ಲೆಕ್ಕಾಚಾರಗಳು ನಡೆದಿವೆ.