ಮೇಲ್ಮನೆ ಚುನಾವಣೆ: ನಾರಾ ಪ್ರತಾಪ್‍ರೆಡ್ಡಿಗೆ ಎಎಪಿ ಬೆಂಬಲ


ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಮಾ.08: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎಎಪಿ ಪಕ್ಷ ಸ್ಪರ್ಧಿಸುತ್ತಿಲ್ಲ. ಬದಲಾಗಿ ಐಎನ್‍ಡಿಐಎ ಒಕ್ಕೋಟವನ್ನು ಬೆಂಬಲಿಸುತ್ತದೆ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಸ್ಪರ್ಧಾಕಾಂಕ್ಷಿಯಾಗಿರುವ ನಾರಾ ಪ್ರತಾಪ್ ರೆಡ್ಡಿ ಅವರನ್ನು ಬೆಂಬಲಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಹೊಸಪೇಟೆಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಹಾಗೂ ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಸರ್ಕಾರ ಆಡಳಿತವಿದೆ. ಅಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಪಡೆದುಕೊಂಡಿದೆ. ಹೀಗಾಗಿ ಕರ್ನಾಟಕದಲ್ಲಿ ಎಎಪಿಗೆ ಸ್ಪರ್ಧಿಸುವ ಅವಕಾಶಗಳಿಲ್ಲ. ಅಲ್ಲದೇ, ವಿಧಾನ ಪರಿಷತ್ ಕ್ಷೇತ್ರ ಗಳ ವ್ಯಾಪ್ತಿ ಹೆಚ್ಚು ಇರುವುದರಿಂದ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳು ಇಲ್ಲ. ಈ ಹಿನ್ನೆಲೆಯಲ್ಲಿ ನಾರಾ ಪ್ರತಾಪ್ ರೆಡ್ಡಿ ಅವರನ್ನು ಬೆಂಬಲಿಸಲು ಉದ್ದೇಶಿಸಿದೆ. ಕಳೆದ ಬಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿರುವ ಪ್ರತಾಪ್ ರೆಡ್ಡಿ ಈ ಬಾರಿ ಪಕ್ಷೇತರರಾರಿ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದರು.
ಪದವೀಧರ ಕ್ಷೇತ್ರದ ಪಕ್ಷೇತರ ಸ್ಪರ್ಧಾಕಾಂಕ್ಷಿ ನಾರಾ ಪ್ರತಾಪ್ ರೆಡ್ಡಿ ಮಾತನಾಡಿ, ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಚಂದ್ರಶೇಖರ್ ಪಾಟೀಲ ಆಯ್ಕೆಯಾಗಿ 6 ವರ್ಷಗಳ ಅವಧಿ ಪೂರ್ಣಗೊಳ್ಳುತ್ತಿದ್ದರೂ, ಈ ಭಾಗದ ಜನರ ಧ್ವನಿಯಾಗಿಲ್ಲ. ತಮ್ಮ ಹುಮನಾಬಾದ್ ತಾಲೂಕು ಹೊರತಾಗಿ ಇತರೆ ತಾಲೂಕುಗಳಿಗೆ ಅನುದಾನವನ್ನೇ ನೀಡಿಲ್ಲ. ಪದವೀಧರರು, ಶಿಕ್ಷಕರು ಹಾಗೂ ನೌಕರರು ಹಿತಕಾಯುವುದಕ್ಕಾಗಿ ಈ ಬಾರಿ ಮತ್ತೊಮ್ಮೆ ಸ್ಪರ್ಧಿಸಲಿಚ್ಛಿಸಿದ್ದೇನೆ. ಈ ಬಾರಿ ಆಯ್ಕೆಯಾದರೆ, ದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೊಳಿಸುವ ಕನಸು ಕಟ್ಟಿಕೊಂಡಿದ್ದೇನೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ನನ್ನ ಪರವಾಗಿ ಚಲಾವಣೆಯಾಗಿದ್ದ ಮತಗಳಲ್ಲಿ 3500 ಮತಗಳು ಕುಲಗೆಟ್ಟಿದ್ದವು. ಮೇಲ್ಮನೆ ಚುನಾವಣೆಯ ಮತದಾನ ಪದ್ಧತಿ ಕುರಿತು ಜನರಿಗೆ ಜಾಗೃತಿ ಇಲ್ಲದಿರುವುದನ್ನು ತೋರಿಸುತ್ತದೆ. ಸರ್ಕಾರ ಸ್ವೀಪ್ ಸಮಿತಿ ಮೂಲಕ ಪ್ರಾಶಸ್ತ್ಯ ಮತದಾನ ಕುರಿತು ಮತದಾರರಲ್ಲಿ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ, ಬಳ್ಳಾರಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮರಿಸ್ವಾಮಿ ರೆಡ್ಡಿ ಉಪಸ್ಥಿತರಿದ್ದರು.
ಕಾಂತರಾಜ್ ವರದಿ ಬಹಿರಂಗಗೊಳಿಸಿ
2015ರಲ್ಲಿ ಕಾಂತರಾಜ್ ವರದಿ ಸಿದ್ಧಗೊಂಡಿದ್ದರೂ, ಸರ್ಕಾರಗಳು ಅದನ್ನು ಒಪ್ಪಿಕೊಳ್ಳುವ ಧೈರ್ಯ ತೋರಲಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರ ಅದನ್ನು ಸ್ವೀಕರಿಸಿರುವುದು ಒಳ್ಳೆಯದು. ವರದಿ ವಸ್ತುಸ್ಥಿತಿಯನ್ನು ಅವಲೋಕಿಸದೇ, ಅವೈಜ್ಞಾನಿಕ, ಲೋಪದೋಷಗಳ ಬಗ್ಗೆ ಚರ್ಚೆ ಸಲ್ಲದು. ಕಳೆದ ಹಲವು ದಶಕಗಳಿಂದ ದೇಶದಲ್ಲಿ ಜಾತಿ ಗಣತಿ ನಡೆದಿಲ್ಲ. ಇದರಿಂದಾಗಿ ಮೀಸಲಾತಿ ವಿಚಾರದಲ್ಲಿ ಕೆಲ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಅದನ್ನು ಸರಿಪಡಿಸಲು ಸರ್ಕಾರ ಕಾಂತರಾಜ್ ವರದಿಯನ್ನು ಬಹಿರಂಗಗೊಳಿಸುವ ದಿಟ್ಟತನ ತೋರಿಸಬೇಕು.
-ಮುಖ್ಯಮಂತ್ರಿ ಚಂದ್ರು, ಎಎಪಿ ರಾಜ್ಯಾಧ್ಯಕ್ಷ.

One attachment • Scanned by Gmail