ಮೇಲ್ಮನೆ ಚುನಾವಣೆ: ಜೆಡಿಎಸ್-ಬಿಜೆಪಿ ಒಳ ಒಪ್ಪಂದ – ಪರಂ ಆರೋಪ

ತುಮಕೂರು, ನ. ೨೮- ರಾಜ್ಯದ ೨೫ ಕ್ಷೇತ್ರಗಳಿಗೆ ಡಿ. ೧೦ ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಳ ಒಪ್ಪಂದು ಮಾಡಿವೆ. ಇದಕ್ಕೆ ೨೫ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕಿಲ್ಲದೇ ಇರುವುದೇ ಸಾಕ್ಷಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಜೆಡಿಎಸ್ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಡೈರೆಕ್ಟ್ ಆಗಿ ಬಿಜೆಪಿ ಬೆಂಬಲಿಸುವುದು ಎಂದರ್ಥ. ಈ ಇಂಡೈರೆಕ್ಟ್ ರಾಜಕಾರ ನಮಗೆಲ್ಲಾ ಕಾಣಿಸುತ್ತಾ ಇದೆ. ಉದ್ದೇಶಪೂರ್ವಕವಾಗಿ ಈ ರೀತಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಜೆಡಿಎಸ್‌ನವರು ಬಿಜೆಪಿಗೆ ಸಹಕಾರ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಮುಂದುವರೆಸಬೇಕು. ನ್ಯಾಯಾಧೀಶರೆ ತನಿಖೆಯ ನೇತೃತ್ವ ವಹಿಸಬೇಕು ಎಂದು ಕೊರಟಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಒತ್ತಾಯಿಸಿದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ತನಿಖೆಯ ವಿಚಾರವನ್ನು ಯಾವ ರೀತಿ ಪರಿಗಣಿಸುತ್ತವೆ ಎಂಬುದನ್ನು ನೋಡಬೇಕು. ಇದರಲ್ಲಿ ಯಾರು ತಪ್ಪು ಮಾಡಿದ್ದಾರೋ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಆ ಕೆಲಸವನ್ನು ರಾಜ್ಯ ಮಾಡಬೇಕು ಎಂದರು.
ರಾಜ್ಯ ಸರ್ಕಾರದ ಸಚಿವರುಗಳು ಅಭಿವೃದ್ಧಿ ಕಾಮಗಾರಿ ವಿಚಾರದಲ್ಲಿ ಗುತ್ತಿಗೆದಾರರಿಂದ ಪರ್ಸೆಂಟ್ ಕಮೀಷನ್ ಕೇಳುತ್ತಿರುವ ವಿಚಾರವನ್ನು ಜನ ಸಮುದಾಯದ ಮುಂದಿಡುತ್ತಿದ್ದೇವೆ. ಈ ಹಿಂದೆ ಬಿಜೆಪಿಯವರು ನಮಗೆ ೧೦ ಪರ್ಸೆಂಟ್ ಸರ್ಕಾರ ಎಂದು ಹೇಳುತ್ತಿದ್ದರು. ಆಗ ಅಧಿಕೃತವಾಗಿ ಗುತ್ತಿಗೆದಾರರ ಅಸೋಸಿಯೇಷನ್‌ನವರು ಆರೋಪ ಮಾಡುವುದರ ಜತೆಗೆ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ ಎಂದರು.
ರಾಜ್ಯದ ಪ್ರತಿ ತಾಲ್ಲೂಕು, ಜಿಲ್ಲೆಗಳಲ್ಲಿ ಗುತ್ತಿಗೆದಾರರಿದ್ದಾರೆ. ಅವರೆಲ್ಲ ನೋಂದಾಯಿತ ಗುತ್ತಿಗೆದಾರರು. ಈ ಗುತ್ತಿಗೆದಾರರು ಪ್ರಧಾನ ಮಂತ್ರಿಗಳಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ ಎಂದರೆ ಇನ್ನೆಷ್ಟರ ಮಟ್ಟಿಗೆ ಕಮೀಷನ್ ಕೊಟ್ಟು ರೋಸಿ ಹೋಗಿರಬೇಕು ಎಂಬುದನ್ನು ಜನರೇ ಯೋಚಿಸಲಿ ಎಂದರು.