ಮೇಲ್ಮನೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಜಗದೀಶ್ ಶೆಟ್ಟರ್ ರವರಿಗೆ ಪಕ್ಷದ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ರವರು ಬಿ. ಫಾರಂ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಹೆಚ್. ಮುನಿಯಪ್ಪ ಇದ್ದಾರೆ.

ಬೆಂಗಳೂರು, ಜೂ. ೨೦- ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ಈ ತಿಂಗಳ ೩೦ ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಜಗದೀಶ್‌ಶೆಟ್ಟರ್, ಎಂ.ಎಸ್. ಬೋಸರಾಜು, ತಿಪ್ಪಣ್ಣಪ್ಪ ಕಮಕನೂರು ಇವರುಗಳು ಇಂದು ನಾಮಪತ್ರ ಸಲ್ಲಿಸಿದ್ದು, ಇವರುಗಳ ಆಯ್ಕೆ ಬಹುತೇಕ ಅವಿರೋಧವಾಗಲಿದೆ.
ವಿಧಾನಪರಿಷತ್‌ನ ಸದಸ್ಯರಾಗಿದ್ದ ಲಕ್ಷ್ಮಣಸವದಿ, ಆರ್. ಶಂಕರ್ ಮತ್ತು ಬಾಬುರಾವ್ ಚಿಂಚನಸೂರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಈ ಮೂರು ಸ್ಥಾನಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿರುವುದರಿಂದ ಮೂರು ಸ್ಥಾನಗಳಿಗೆ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ.
ಕಾಂಗ್ರೆಸ್ ಪಕ್ಷ ಈ ಮೂರು ಸ್ಥಾನಗಳಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್, ಸಚಿವ ಎಂ.ಎಸ್. ಬೋಸರಾಜು ಹಾಗೂ ತಿಪ್ಪಣ್ಣಪ್ಪಕಮನಕೂರು ಇವರುಗಳನ್ನು ಅಭ್ಯರ್ಥಿಯಾಗಿ ನಿನ್ನೆ ಆಯ್ಕೆ ಮಾಡಿತ್ತು. ಈ ಮೂವರು ಇಂದು ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿಯಾಗಿರುವ ವಿಧಾನಸಭೆಯ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಸಲ್ಲಿಸಿದರು.
ಈ ಮೂವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು,
ಈ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿದೆ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿಲ್ಲ. ಹಾಗಾಗಿ ಈ ಮೂವರ ಆಯ್ಕೆ ಅವಿರೋಧವಾಗುವುದು ಬಹುತೇಕ ನಿಶ್ಚಿತ.
ಈ ಉಪಚುನಾವಣೆಯ ನಾಮಪತ್ರದ ಪರಿಶೀಲನೆ ನಾಳೆ ನಡೆಯಲಿದ್ದು, ಜೂ. ೨೩ ರಂದು ನಾಮಪತ್ರ ವಾಪಸ್ಸಾತಿಗೆ ಕಡೆಯ ದಿನವಾಗಿದೆ.