ಮೇಲ್ಮನೆ ಚುನಾವಣೆಯಲ್ಲಿ ನಾಯಕ ಸಮುದಾಯದವರಿಗೆ ಅವಕಾಶಕ್ಕೆ ಒತ್ತಾಯ

ಮೈಸೂರು,ನ.16:- ಹಳೇ ಮೈಸೂರು ಭಾಗದ ನಾಯಕ ಸಮುದಾಯದವರಿಗೆ ಸ್ಥಳೀಯ ಸಂಸ್ಥೆ ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ ಅವರು ಮಾತನಾಡಿ ಮೈಸೂರು ವಿಭಾಗಕ್ಕೆ ಒಳಪಡುವ ಮೈಸೂರು , ಚಾಮರಾಜನಗರ, ಮಂಡ್ಯ, ಹಾಸನ, ಮಡಿಕೇರಿ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಂತೆ ಸುಮಾರು 11 ರಿಂದ 12 ಲಕ್ಷ ನಮ್ಮ ಸಮುದಾಯದವರಿದ್ದು ಈ ವ್ಯಾಪ್ತಿಯಲ್ಲಿ ಕೇವಲ ಒಬ್ಬರೇ ಮೀಸಲಾತಿ ಕ್ಷೇತ್ರದ ಶಾಸಕರಿರುತ್ತಾರೆ. ನಾವು ಸುಮಾರು ಈ ವ್ಯಾಪ್ತಿಯ 7-8 ಕ್ಷೇತ್ರಗಳಲ್ಲಿ ಸುಮಾರು 25 ರಿಂದ 40 ಸಾವಿರದವರೆಗೆ ಮತದಾರರಿದ್ದು ಈ ಸಾಮಾನ್ಯ ಕ್ಷೇತ್ರಗಳಲ್ಲಿಯೂ ನಮ್ಮ ಸಮುದಾಯದವರು ಚುನಾವಣೆಯಲ್ಲಿ ಗೆಲ್ಲಲು ಅವಕಾಶವಿದೆ. ಆದರೆ ಯಾವುದೇ ರಾಜಕೀಯ ಪಕ್ಷಗಳು ಈ ಸಾಮಾನ್ಯ ಕ್ಷೇತ್ರಗಳಲ್ಲಿ ಅವಕಾಶ ನೀಡದೆ ವಂಚಿಸುತ್ತಿದ್ದು ರಾಜಕೀಯವಾಗಿ ಈ ಭಾಗದಲ್ಲಿ ನಮಗೆ ಹಿನ್ನಡೆಯಾಗಿದೆ ಎಂದರು.
ಕಳೆದ 10 ವರ್ಷಗಳ ಹಿಂದೆ ಈ ಭಾಗದಲ್ಲಿ ಇಬ್ಬರು ನಮ್ಮ ಸಮುದಾಯದ ವಿಧಾನ ಪರಿಷತ್ ಸದಸ್ಯರಿದ್ದರು. ಈಗ ಒಬ್ಬರೂ ಇಲ್ಲ. ಇದು ಎಲ್ಲಾ ರಾಜಕೀಯ ಪಕ್ಷಗಳು ನಮಗೆ ಮಾಡಿರುವ ರಾಜಕೀಯ ದ್ರೋಹ. ಆದ್ದರಿಂದ ಮುಂದಿನ ತಿಂಗಳ 10 ನೇ ತಾರೀಖು ನಡೆಯುವ 25 ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು ವಿಭಾಗಕ್ಕೆ ಕನಿಷ್ಠ ಮೂವರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಒತ್ತಾಯಿಸುತ್ತೇವೆ ಎಂದರು. ಒಂದು ವೇಳೆ ಯಾವುದೇ ರಾಜಕೀಯ ಪಕ್ಷಗಳು ಅವಕಾಶ ನೀಡದೆ ಇದ್ದರೆ ಸಮುದಾಯದ ಮುಖಂಡರ ಸಭೆ ಕರೆದು ಮುಂಬರುವ ಚುನಾವಣೆಯಲ್ಲಿ ಯಾವ ರೀತಿ ನಮ್ಮ ಸಮುದಾಯ ಭಾಗವಹಿಸಬಹುದು ಎಂಬ ಬಗ್ಗೆ ನಿರ್ಣಯವನ್ನು ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಭಾಕರ್ ಹುಣಸೂರು, ಶ್ರೀಧರ್ ಚಾಮುಂಡಿಬೆಟ್ಟ, ಚನ್ನ ನಾಯಕ, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.