ಮೇಲ್ಮನೆಗೆ ಶ್ರೀನಿವಾಸ್ ಸಗರ್ ನಾಮನಿರ್ದೇಶನಕ್ಕೆ ಉಪ್ಪಾರ್ ಸಂಘದ ಒತ್ತಾಯ

ಕಲಬುರಗಿ,ಜೂ.6: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ಕಾರ್ಯಕರ್ತ ಶ್ರೀನಿವಾಸ್ ಸಗರ್ ರಾವೂರ್ ಅವರಿಗೆ ರಾಜ್ಯ ವಿಧಾನ ಪರಿಷತ್‍ಗೆ ನಾಮ ನಿರ್ದೇಶನ ಮಾಡಬೇಕು ಎಂದು ಜಿಲ್ಲಾ ಉಪ್ಪಾರ್ ಸಂಘದ ಉಪಾಧ್ಯಕ್ಷ ನರಸಪ್ಪ ಆರ್. ಜಡಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ್ ಸಗರ್ ರಾವೂರ್ ಅವರು ಕಳೆದ 40 ವರ್ಷಗಳಿಂದ ಪಕ್ಷ ಸಂಘಟನೆ ಮತ್ತು ವಿವಿಧ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರೂ ಆಗಿದ್ದಾರೆ ಎಂದು ತಿಳಿಸಿದರು.
ರಾವೂರ್ ಅವರು ಹಿಂದುಳಿದ ವರ್ಗದ ಉಪ್ಪಾರ್ ಸಮಾಜಕ್ಕೆ ಸೇರಿದ್ದಾರೆ. ಕಲ್ಯಾಣ ಕರ್ನಾಟಕದ ವಿಧಾನಸಭಾ ಮತಕ್ಷೇತ್ರಗಳಲ್ಲಿ ಉಪ್ಪಾರ್ ಸಮಾಜದ ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಮಾಡುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದಾರೆ. ಆದ್ದರಿಂದ ಶ್ರೀನಿವಾಸ್ ಸಗರ್ ರಾವೂರ್ ಅವರಿಗೆ ರಾಜ್ಯ ವಿಧಾನ ಪರಿಷತ್‍ಗೆ ನಾಮ ನಿರ್ದೇಶನ ಮಾಡುವ ಮೂಲಕ ಉಪ್ಪಾರ್ ಸಮಾಜಕ್ಕೆ ಸೂಕ್ತ ಸ್ಥಾನಮಾನ ಕೊಡಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವಪ್ಪ ಜೆ. ಉಪ್ಪಾರ್, ವೆಂಕಟೇಶ್ ನೀರಡಗಿ, ಅಶೋಕ್ ಚೂರಿ, ವಿಠೋಬ್ ಗೌಂಡಿ ಮುಂತಾದವರು ಉಪಸ್ಥಿತರಿದ್ದರು.