ಮೇಲ್ಮನೆಗೆ ಚಿಂಚನಸೂರ್ ಅವಿರೋಧ ಆಯ್ಕೆ

ಬೆಂಗಳೂರು, ಆ.4- ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಬೇಕಿದ್ದ ಉಪಚುನಾವಣೆಗೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂಬಂಧ ಚುನಾವಣಾಧಿಕಾರಿ ಎಂ‌.ಕೆ.ವಿಶಾಲಾಕ್ಷಿಯವರು ಅಧಿಕೃತವಾಗಿ ಇಂದು ಘೋಷಿಸಿದ್ದಾರೆ.
ಎಂ.ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಘೋಷಿಸಲಾಗಿತ್ತು. ಆ.11ಕ್ಕೆ ಮತದಾನ ಹಾಗೂ ಅದೇ ದಿನ ಸಂಜೆ ಮತ ಎಣಿಕೆಗೆ ದಿನಾಂಕ ನಿಗದಿಪಡಿಸಲಾಗಿತ್ತು.
ಪರಿಷತ್‌ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.