ಅಫಜಲಪುರ:ಜು.13: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರದಂದು ತಾಲೂಕಿನ ಅರ್ಜುಣಗಿಯಲ್ಲಿ ಜರುಗಿದೆ.
4 ನೇ ತರಗತಿಯ ಪ್ರಮೋದ ದೊಡ್ಮನಿ ಗಾಯಗೊಂಡ ವಿದ್ಯಾರ್ಥಿಯಾಗಿದ್ದು ಈತನಿಗೆ ಪಕ್ಕದ ರೇವೂರ (ಬಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಧ್ಯಾಹ್ನ ಬಿಸಿ ಊಟದ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳು ಶಾಲಾ ಕೊಠಡಿಯಿಂದ ಊಟಕ್ಕೆ ಹೋದ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ಪ್ರಮೋದ ದೊಡ್ಮನಿ ಮಾತ್ರ ಊಟ ಮುಗಿಸಿಕೊಂಡು ಶಾಲಾ ಕೊಠಡಿಯಲ್ಲಿ ಬಂದಾಗ ಏಕಾಏಕಿ ಮೇಲ್ಚಾವಣಿ ಕುಸಿದಿದೆ. ಈ ಹಿಂದೆಯೂ ಕೂಡ ತಾಲೂಕಿನ ಆನೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದ ಪರಿಣಾಮ ಅನೇಕ ವಿದ್ಯಾರ್ಥಿಗಳು ಗಾಬರಿಗೊಂಡಿದ್ದರು. ಹೀಗಾಗಿ ತಾಲೂಕಿನ ಹಲವಡೆ ಕುಸಿಯುವ ಹಂತದಲ್ಲಿ ಬಂದಿರುವ ಶಾಲಾ ಕಟ್ಟಡಗಳನ್ನು ಮರು ನಿರ್ಮಾಣಗೊಳಿಸಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ