ಭಾಲ್ಕಿ:ಜೂ.24: ತಾಲೂಕಿನ ನಿಟ್ಟೂರು(ಬಿ) ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಈಚೆಗೆ ಮೇಲ್ಛಾವಣಿಯಿಂದ ವಿದ್ಯಾರ್ಥಿನಿಯೊಬ್ಬಳು ಜಿಗಿದು ದುರ್ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿದ ಅವರು ಮೇಲ್ಛಾವಣಿಗೆ ಹೋಗುವ ಬಾಗಿಲು ಸರಿಯಾಗಿದ್ದರೇ ಚೀಲಕ ಹಾಕಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ.
ಅದೃಷ್ಟವಶಾತ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆ ಕಾರಣ ಏನೆಂಬುವುದು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಸ್ಯೆ ಬಿಚ್ಚಿಟ್ಟ ವಿದ್ಯಾರ್ಥಿಗಳು :
ಇದೇ ವೇಳೆ ಆಯೋಗದ ಸದಸ್ಯ ಶಶಿಧರ ಕೋಸಂಬೆ ಎದುರು ವಿದ್ಯಾರ್ಥಿಗಳು ವಸತಿ ನಿಲಯದಲ್ಲಿನ ಸಮಸ್ಯೆ ಬಿಚ್ಚಿಟ್ಟು ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರು. ಸೋಲಾರ ಕೆಟ್ಟಿದ್ದು ಪ್ರತಿದಿನ ತಣ್ಣೀರಿನಿಂದ ಸ್ನಾನ ಮಾಡುವ ಪರಿಸ್ಥಿತಿ ಇದೆ. ಮೆನು ಪ್ರಕಾರ ಊಟ ನೀಡುತ್ತಿಲ್ಲ, ವಸತಿ ನಿಲಯದಲ್ಲಿ ಪ್ರಾಚಾರ್ಯರು ವಾಸ ಮಾಡುತ್ತಿಲ್ಲ ಎಂದು ಹೀಗೆ ಹಲವು ಸಮಸ್ಯೆಗಳು ವಿದ್ಯಾರ್ಥಿಗಳು ಬಿಚ್ಚಿಟ್ಟರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಅವರು ಅಡುಗೆ ಕೋಣೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿ ನಿಯಮ ಪ್ರಕಾರ ಮಕ್ಕಳಿಗೆ ಊಟ ನೀಡದಿರುವುದು, ತರಕಾರಿ ಪಲ್ಲೆ ಇಲ್ಲದಿರುವುದು, ಊಟಕ್ಕೆ ಬರೀ ತಿಳಿ ಸಾರು ಇರುವುದು ಕಂಡು ಅಲ್ಲಿದ್ದ ಸಿಬ್ಬಂದಿಗೆ ತರಾಟೆಗೆ ತೆಗೆದು ಕೊಂಡರು. ಪ್ರಾಚಾರ್ಯ ಮತ್ತು ಸಿಬ್ಬಂದಿಗಳ ವಾಸಕ್ಕೆ ನಿಲಯದಲ್ಲಿ ಪ್ರತ್ಯೇಕ ವಸತಿ ಕಟ್ಟಡ ಇದ್ದರೂ ಪ್ರಾಚಾರ್ಯರು ವಾಸ ಮಾಡದಿದ್ದರೇ ಮಕ್ಕಳ ಸಮಸ್ಯೆ ಕೇಳುವರ್ಯಾರೂ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ದೂರು ಪೆಟ್ಟಿಗೆ ಇಲ್ಲದಿರುವುದು ಗಮನಿಸಿದ ಅವರು ಕೂಡಲೇ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು. ಕಡ್ಡಾಯಾಗಿ ಪ್ರಾಚಾರ್ಯರು ವಸತಿ ನಿಲಯದಲ್ಲಿ ವಾಸವಿದ್ದು ಸಮಸ್ಯೆಗಳನ್ನು ಆಲಿಸಬೇಕು. ಮಕ್ಕಳ ಸಮಸ್ಯೆಗೆ ಸ್ಪಂದಿಸಲು ಕಡ್ಡಾಯವಾಗಿ ದೂರು ಪೆಟ್ಟಿಗೆ ಅಳವಡಿಸಬೇಕು. ಇಲ್ಲದಿದ್ದರೆ ಸಂಬಧಿತರ ವಿರುದ್ಧ ಕ್ರಮ್ಕಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಗತ್ಯ ಇರುವ ಕಡೆಗಳಲ್ಲಿ ಸಿಸಿ ಕ್ಯಾಮರಾ, ರಾತ್ರಿ ಕಾವಲುಗಾರನನ್ನು ನೇಮಿಸಿ ಕೊಳ್ಳುವಂತೆ ಸೂಚಿಸಿದರು.