ಮೇಲುಗೈಗಾಗಿ ಬಿಎಸ್‌ವೈ ಹಗ್ಗಜಗ್ಗಾಟ

ಬೆಂಗಳೂರು,ಜು. ೨೦- ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಗೌರವಯುತ ನಿರ್ಗಮನಕ್ಕೆ ವೇದಿಕೆ ರೂಪುಗೊಳ್ಳುತ್ತಿದೆ ಎಂಬ ಸುದ್ದಿಗಳು ದಟ್ಟವಾವಾಗುತ್ತಿರುವಾಗಲೇ ರಾಜ್ಯರಾಜಕೀಯದಲ್ಲಿ ಚಟುವಟಿಕೆಗಳು ಬಿರುಸು ಪಡೆದಿದ್ದು, ಅಧಿಕಾರ ಉಳಿಸಿಕೊಳ್ಳುವ ಹಗ್ಗಜಗ್ಗಾಟ ನಡೆದಿದೆ. ಒಂದೆಡೆ ಯಡಿಯೂರಪ್ಪ ಆಪ್ತ ಸಚಿವರು, ಶಾಸಕರು ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ವಲಸಿಗ ಸಚಿವರೂ ಸೇರಿದಂತೆ ಹಲವು ಸಚಿವರು ತಮ್ಮ ಸ್ಥಾನಗಳಿಗೆ ಚ್ಯುತಿಯಾಗದಂತೆ ಎಚ್ಚರ ವಹಿಸಿ ಸಭೆಗಳನ್ನು ನಡೆಸಿದ್ದಾರೆ.
ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅಧಿಕಾರದಲ್ಲಿ ಮುಂದುವರೆಸುವ ಪ್ರಯತ್ನಗಳು ಬಿರುಸು ಪಡೆದಿದ್ದು, ಲಿಂಗಾಯತ ಅಸ್ಮಿತೆಯನ್ನು ಗುರಾಣಿಯಾಗಿಸಿಕೊಂಡು ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಯಡಿಯೂರಪ್ಪ ಆಪ್ತರು ನಡೆಸಿದ್ದಾರೆ.
ದೆಹಲಿಯಿಂದ ಹಿಂದಿರುಗಿದ ನಂತರ ಯಡಿಯೂರಪ್ಪನವರು ಜು. ೨೬ ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಈ ಸಭೆ ನಿರ್ಣಾಯಕ ಸಭೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇದೇ ಗುರುವಾರ (ಜು. ೨೨) ರಂದು ಸಚಿವ ಸಂಪುಟದ ಸಭೆಯನ್ನು ಕರೆದಿದ್ದಾರೆ,
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ತಮ್ಮ ಆಪ್ತ ಸಚಿವರ ಜತೆ ಭೋಜನ ಕೂಟದ ಸಭೆ ನಡೆಸಿ ಮುಂದಿನ ತಮ್ಮ ನಡೆ ಆಗುಹೋಗುಗಳ ಬಗ್ಗೆ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ವಿ. ಸೋಮಣ್ಣ, ಡಾ. ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಭೈರತಿ ಬಸವರಾಜು ಸೇರಿದಂತೆ ಯಡಿಯೂರಪ್ಪ ಆಪ್ತ ಸಚಿವರುಗಳು ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸಕ್ಕೆ ಶಾಸಕರುಗಳ ದಂಡೇ ಹರಿದು ಬರುತ್ತಿದ್ದು, ಇಂದು ಬೆಳಿಗ್ಗೆಯೇ ಸಚಿವ. ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಸೇರಿದಂತೆ ಶಾಸಕರುಗಳಾದ ರೇಣುಕಾಚಾರ್ಯ, ಅಮೃತ ದೇಸಾಯಿ, ವಿರೂಪಾಕ್ಷಪ್ಪ ಮಾಡಾಳ್ ಸೇರಿದಂತೆ ಹಲವು ಶಾಸಕರು ಭೇಟಿ ನೀಡಿ ಚರ್ಚೆ ನಡೆಸಿದರು.
ಸ್ವಾಮೀಜಿಗಳು-ಲಿಂಗಾಯತ ನಾಯಕರ ಬೆಂಬಲ
ಯಡಿಯೂರಪ್ಪನವರ ಪದಚ್ಯುತಿ ಯತ್ನ ಬಿರುಸು ಪಡೆದಿರುವಾಗಲೇ ಲಿಂಗಾಯತ ಅಸ್ಮಿತೆಯನ್ನು ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ವೀರಶೈವ ಲಿಂಗಾಯತ ಸ್ವಾಮೀಜಿಗಳು ಇತರ ಪಕ್ಷಗಳ ವೀರಶೈವ ಲಿಂಗಾಯತ ಮುಖಂಡರುಗಳು, ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿದ್ದು, ಯಡಿಯೂರಪ್ಪರವರನ್ನು ಬದಲಾಯಿಸಿದರೆ ಬಿಜೆಪಿಗೆ ತೊಂದರೆಯಾಗುತ್ತದೆ. ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿನ್ನೆ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸುಮಾರು ಹೊತ್ತು ಚರ್ಚೆ ನಡೆಸಿದರು. ಹಾಗೆಯೇ ಕಾಂಗ್ರೆಸ್‌ನ ಮಾಜಿ ಸಚಿವ ಶಾಸಕ ಎಂ.ಬಿ. ಪಾಟೀಲ್ ಬೆಂಬಲಕ್ಕೆ ಬಂದಿದ್ದಾರೆ.
ರಂಭಾಪುರಿ ಶ್ರೀಗಳು, ಚಿತ್ರದುರ್ಗ ಮುರುಘ ಶ್ರೀಗಳೂ ಸೇರಿದಂತೆ ಹಲವು ವೀರಶೈವ ಲಿಂಗಾಯತ ಮಠಾಧೀಶರು ಯಡಿಯೂರಪ್ಪನವರ ಬೆನ್ನಿಗೆ ನಿಂತಿದ್ದು, ಯಡಿಯೂರಪ್ಪನವರ ಪದಚ್ಯುತಿ ಜಾತಿ ಸ್ವರೂಪ ಪಡೆದುಕೊಂಡಿದೆ.
ಲಿಂಗಾಯತ ಅಸ್ಮಿತೆಯನ್ನು ಗುರಾಣಿಯನ್ನಾಗಿಸಿಕೊಂಡು ಯಡಿಯೂರಪ್ಪನವರನ್ನು ಅಧಿಕಾರದಲ್ಲಿ ಉಳಿಸಿಕೊಳ್ಳುವ ಶತಪ್ರಯತ್ನಗಳು ನಡೆದಿವೆ.

ಸಭೆ ನಡೆಸಿದ ವಲಸಿಗ ಸಚಿವರು

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾಗಲಿದ್ದಾರೆ ಎಂಬ ವದಂತಿಗಳ ನಡುವೆಯೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿರುವ ವಲಸಿಗ ಸಚಿವರುಗಳು ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಯಡಿಯೂರಪ್ಪನವರ ನಾಯಕತ್ವ ಬದಲಾದರೆ ತಮ್ಮ ಸಚಿವ ಸ್ಥಾನಗಳಿಗೂ ಖುತ್ತು ಬರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ವಲಸಿಗ ಸಚಿವರುಗಳು ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
ಯಡಿಯೂರಪ್ಪನವರು ಬದಲಾದರೆ ತಮ್ಮ ಸ್ಥಾನಗಳೂ ಬದಲಾಗಬಹುದು, ಹಾಗಾಗಿ, ಯಡಿಯೂರಪ್ಪನವರು ಮಉಖ್ಯಮಂತ್ರಿಯಾಗಿ ಮುಂದುವರೆಸುವುದು ಸೂಕ್ತ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆಯೂ ವರಿಷ್ಠರ ಜತೆ ಮಾತನಾಡುವುದರ ಜತೆಗೆ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವ ಬಗ್ಗೆ ಈ ವಲಸಿಗ ಸಚಿವರು ನಿನ್ನೆ ರಾತ್ರಿ ಬಹು ಹೊತ್ತಿನವರೆಗೂ ರಹಸ್ಯ ಸ್ಥಳದಲ್ಲಿ ಸಭೆ ನಡೆಸಿದರು ಎಂದು ಗೊತ್ತಾಗಿದೆ.
ಈ ಸಭೆಯಲ್ಲಿ ವಲಸಿಗ ಸಚಿವರುಗಳಾದ ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಬಿ.ಸಿ. ಪಾಟೀಲ್, ಭೈರತಿ ಬಸವರಾಜು, ಶಿವರಾಂ ಹೆಬ್ಬಾರ್, ಆರ್. ಶಂಕರ್, ಎಂ.ಟಿ.ಬಿ ನಾಗರಾಜ್ ಪಾಲ್ಗೊಂಡಿದ್ದರು ಎನ್ನಲಾಗಿದೆ.