ಮೇಲಾಧಿಕಾರಿಗಳ ಕಿರುಕುಳ :ವಿಸ್ತೀರ್ಣಾಧಿಕಾರಿ ಆತ್ಮಹತ್ಯೆ

ಕಲಬುರಗಿ:ನ.5: ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತೀರ್ಣಾಧಿಕಾರಿ ಶರಣಬಸಪ್ಪ ಅವರು ನಗರದ ಬಾಡಿಗೆ ಮನೆಯೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೇಲಾಧಿಕಾರಿ ಮಹಿಮೂದ್ ಅವರ ವಿರುದ್ಧ ರಾಘವೇಂದ್ರ ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂಲತ: ಆಳಂದ್ ತಾಲ್ಲೂಕಿನ ಖಂಡಾಳ್ ಗ್ರಾಮದ ಶರಣಬಸಪ್ಪ ತಂದೆ ರಾಮಲಿಂಗ್ ಪಾಟೀಲ್ ಅವರು ಅಲ್ಪಸಂಖ್ಯಾತರ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ನಗರದ ಕೆಹೆಚ್‍ಬಿ ಕಾಲೋನಿಯ ಗ್ರೀನ್ ಪಾರ್ಕ್‍ನ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಮೃತರ ಸಹೋದರ ಪಂಡಿತರಾವ್ ತಂದೆ ರಾಮಲಿಂಗ್ ಪಾಟೀಲ್ ಅವರು ಈ ಕುರಿತು ದೂರು ಸಲ್ಲಿಸಿ, ಸುಮಾರು 8 ತಿಂಗಳಿಂದ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಎಫ್‍ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಅಣ್ಣ ಶರಣಬಸಪ್ಪ ಪಾಟೀಲ್ ಅವರು ತನಗೆ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಮೆಹಮೂದ್ ಅವರು ಹುಡುಗರ ಮೂಲಕ ಜೀವ ಬೆದರಿಕೆ ಹಾಕಿರುವ ಕುರಿತು ಮಾಹಿತಿ ನೀಡಿದ್ದರು. ಇದಾದ ನಂತರ ವೈಯಕ್ತಿಕ ದ್ವೇಷ ಸಾಧಿಸಿ ಜಿಲ್ಲಾ ಅಧಿಕಾರಿ ಮೆಹಮೂದ್ ಅವರು ಬಡ್ತಿ ಹಾಗೂ ಒಂದು ವರ್ಷದ ವೇತನ ತಡೆ ಹಿಡಿದಿದ್ದರಿಂದ ಮಾನಸಿಕ ವೇದನೆಯಲ್ಲಿ ಇದ್ದರು. ಅಲ್ಲದೇ ಆಗಾಗ ದೂರವಾಣಿ ಕರೆ ಮಾಡಿ ವಿನಾಕಾರಣ ತೊಂದರೆ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ತಾಲ್ಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶರಣಬಸಪ್ಪ ಅವರ ಮದುವೆಯು ಸಹ ಡಿಸೆಂಬರ್ 2ರಂದು ನಿಶ್ಚಯಿಸಲಾಗಿತ್ತು. ತನ್ನ ಮದುವೆಯ ತಯಾರಿಯಲ್ಲಿ ಉತ್ಸುಕತೆಯಿಂದ ಪಾಲ್ಗೊಂಡಿದ್ದು, ನವೆಂಬರ್ 3ರಂದು ರಾತ್ರಿ 8-30ಕ್ಕೆ ಕೆಎಚ್‍ಬಿ ಗ್ರೀನ್ ಪಾರ್ಕ್‍ನ ಬ್ಲಾಕ್‍ನ 104ರ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಈ ಕುರಿತು ತನಿಖೆ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಕೋರಿದ್ದಾರೆ. ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.