ಕಲಬುರಗಿ,ಜು.7-“ಹಿರಿಯ ಪೊಲೀಸ್ ಅಧಿಕಾರಿಗಳು, ಮೇಲಾಧಿಕಾರಿಗಳು ಕಿರುಕುಳ ನೀಡಿಲ್ಲ, ಹಣ ಸಂಗ್ರಹ ಮಾಡುವಂತೆ, ಹಫ್ತಾ ವಸೂಲಿ ಮಾಡುವಂತೆ ಹೇಳಿಲ್ಲ. ಇದರಿಂದ ನಾನು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿಲ್ಲ ಎಂದು ಸಂಚಾರಿ ಪೊಲೀಸ್ ಠಾಣೆ-1ರ ಪೇದೆ ಚಂದ್ರಕಾಂತ ಅವರು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಆಸ್ಪತ್ರೆಯಿಂದಲೇ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದು ನಿಜ. ಆದರೆ ಹಿರಿಯ ಪೊಲೀಸ್ ಅಧಿಕಾರಿಳು ಹಣ ಸಂಗ್ರಹ ಮಾಡುವಂತೆ, ಹಫ್ತಾ ವಸೂಲಿ ಮಾಡುವಂತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ.
ಯಾವುದೇ ಅಧಿಕಾರಿ ಹಫ್ತಾ ವಸೂಲಿ ಮಾಡುವಂತೆ ಕಿರುಕುಳ ನೀಡಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ವರ್ಗಾವಣೆಯಾಗಿರುವುದು ನಿಜ. ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇನ್ನೊಂದು ವರ್ಷ ಅವಕಾಶ ನೀಡುವಂತೆ ಕಮೀಷನರ್ ಅವರಿಗೆ ಕೋರಿದ್ದೇನೆ, ಅವರು ಸ್ವಲ್ಪ ಕಾಯುವಂತೆ ಹೇಳಿದ್ದಾರೆ. ಅವರು ಸ್ಪಂದಿಸುವ ಭರವಸೆ ಇದೆ ಎಂದಿದ್ದಾರೆ.