ಮೇಯರ್ ವಿಳಂಬ: ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ

ಹುಬ್ಬಳ್ಳಿ,ನ29: ಇಂದು ನಡೆದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಮೇಯರ್ ವೀಣಾ ಬಾರದ್ವಾಡ ಹಾಗೂ ಉಪ ಮೇಯರ್ ಸತೀಶ್ ಹಾನಗಲ್ ಅವರು ಬರುವುದು ತಡವಾದ ಹಿನ್ನೆಲೆಯಲ್ಲಿ ಪ್ರತಿಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲಹೊತ್ತು ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು.

ಸಭೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾಯಿತು. ಮುಖ್ಯಮಂತ್ರಿಗಳು ಹಾವೇರಿ ಜಿಲ್ಲೆಯ ಪ್ರವಾಸದಲ್ಲಿರುವುದರಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ವೀಣಾ ಬಾರದ್ವಾಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತ ಮಾಡಲು ಹೋಗಿದ್ದರು. ಸಭೆಗೆ ಪ್ರತಿಪಕ್ಷ ಹಾಗೂ ಆಡಳಿತ ರೂಢ ಸದಸ್ಯರು ಆಗಮಿಸಿ 20 ನಿಮಿಷಗಳ ಕಾಲವಾದರೂ ಸಭೆ ಆರಂಭಗೊಳ್ಳಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಿಂದ ಮಾತಿನ ಚಕಮಕಿ ನಡೆಯಿತು.

ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಎಲ್ ಆ್ಯಂಡ್ ಟಿ ವಿಷಯಕ್ಕೆ ಸಂಬಂಧಿಸಿದಂತೆ ವಿಷಯಪಟ್ಟಿಯನ್ನು ಒಂದು ವಾರ ಮುಂಚೆ ಕೊಡಬೇಕು. ಈಗ ವಿಷಯಪಟ್ಟಿ ಕೊಟ್ಟರೆ ಹೇಗೆ ಚರ್ಚಿಸಬೇಕು ಎಂದು ಸದಸ್ಯರು ವಾದಿಸಿದಾಗ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ವಿಷಯವಾಗಿ ಮೇಯರ್ ಅವರು ಮುಂದಿನ ಸಭೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದರು.

ಸಂಬಂಧಿಸಿದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ನೀಡಬೇಕೆಂದೂ ಪಾಲಿಕೆ ಸದಸ್ಯರು ಒತ್ತಾಯಿಸಿದರು.