ಮೇಯರ್ ಚುನಾವಣೆ ನಾಳೆ ಮತ್ತೆ ಸಭೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.27: ನಾಡಿದ್ದು ನಡೆಯಲಿರುವ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಸಂಬಂಧ ಇಂದು ನಗರದ ಅಲ್ಲಂ ಹೊಟೇಲ್ ನಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಒಮ್ಮತ ಮೂಡದ ಕಾರಣ‌ ನಾಳೆ ಅಂತಿಮ‌ ಸುತ್ತಿನ ಸಭೆ ನಡೆಸಲು ನಿರ್ಧರಿಸಿತು.
ಕೆಪಿಸಿಸಿ  ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆಯ ಕಾಂಗ್ರೆಸ್ ಪಕ್ಷದ ಮತ್ತು ಪಕ್ಷೇತರರಾಗಿ ಆಯ್ಕೆಯಾಗಿದ್ದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆಕಾಂಕ್ಷಿಗಳು, ಅವರ ಬೆಂಬಲಿಗರೂ ಇದ್ದರು.
ತಮ್ಮ ತಮ್ಮ ಅಹವಾಲನ್ನು ಸಲ್ಲಿಸಿದ್ದಾರೆ. ಆಯ್ಕೆಯನ್ನು ಆಂತರಿಕ ಮತದಾನದ ಮೂಲಕ, ಇಲ್ಲ ಹೈ ಕಮಾಂಡಿಗೆ ಬಿಡುವುದು ಎಂಬ ಎರೆಡು ಅಭಿಪ್ರಾಯಗಳು ವ್ಯಕ್ತವಾಗಿದೆಂದು ತಿಳಿದು ಬಂದಿದೆ.
ಅಲ್ಲದೆ, ಗ್ರಾಮೀಣ ಶಾಸಕ ನಾಗೇಂದ್ರ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರು ನಾಳೆ ಬರಲಿದ್ದು, ನಾಳೆ ಅಂತಿಮ‌ ಸುತ್ತಿನ  ಸಭೆ ನಡೆಸಿ ತೀರ್ಮಾನ ಮಾಡುವ ಬಗ್ಗೆ ಚರ್ಚಿಸಲಾಯಿತಂತೆ.
ಸಭೆ ನಂತರ ಸಂಜೆವಾಣಿಯೊಂದಿಗೆ ಮಾತನಾಡಿದ ಅಲ್ಲಂ ವೀರಭದ್ರಪ್ಪ ಅವರು. ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಆಪೇಕ್ಷೆ ಇತರರಲ್ಲಿ ಇರುವುದು ಸಹಜ, ನಾಳೆ ಮತ್ತೊಮ್ಮೆ ಸಭೆ ಕರೆದಿದೆ ಯಾರಾಗ ಬೇಕೆಂಬುದನ್ನು ಸದಸ್ಯರ ಬೆಂಬಲ ಮತ್ತು ಹೈ ಕಮಾಂಡ್ ಸೂಚನೆಯಂತೆ ಮಾಡಲಿದೆ. ಸ್ಥಳೀಯ ಮುಖಂಡರಾದ ನಾವು ನಮ್ಮ‌ ಜವಾಬ್ದಾರಿಯನ್ನು ನಿರವಹಿಸುತ್ತಿದ್ದೇವೆ ಎಂದರು.