ಮೇನಲ್ಲಿ ಕಾದಿದೆ ಗ್ರಹಚಾರ

ನವದೆಹಲಿ, ಏ.೨೨- ಕೋವಿಡ್ ಎರಡನೇ ಅಲೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಭಾರತಕ್ಕೆ ಮತ್ತೊಂದು ಗಂಡಾಂತರ ಎದುರಾಗಿದ್ದು, ಮೇ ತಿಂಗಳಿನಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳಲಿವೆ.
ಮೇ ೧೧ ರ ನಡುವೆ ಬರೋಬ್ಬರಿ ೩೩ರಿಂದ ೩೫ ಲಕ್ಷ ’ಸಕ್ರಿಯ’ ಸೋಂಕಿನ ಪ್ರಕರಣಗಳು ಬೆಳಕಿಗೆ ಬರಲಿದ್ದು, ಭಾರೀ ಭೀತಿ ಹುಟ್ಟಿಸಿದೆ. ದೇಶದೆಲ್ಲೆಡೆ ಪ್ರಕರಣಗಳ ಸಂಖ್ಯೆ ಕ್ಷೀಣಿಸುವ ಮುನ್ನ ಇನ್ನೂ ಮೂರು ವಾರಗಳವರೆಗೆ ಹೆಚ್ಚಾಗಲಿದೆ.
ಕಳೆದ ವರ್ಷ ಸೆಪ್ಟೆಂಬರ್ ೧೭ ರಂದು ದಾಖಲಾದ ೧೦ ಲಕ್ಷಕ್ಕೂ ಹೆಚ್ಚು ‘ಸಕ್ರಿಯ’ ಪ್ರಕರಣಗಳ ಸಂಖ್ಯೆಯೂ ಮೇ ಮಧ್ಯದಲ್ಲಿ ಮೂರು ಪಟ್ಟು ಹೆಚ್ಚಾಗಲಿವೆ.ಹಾಗಾಗಿ ವೈದ್ಯಕೀಯ ಸರಬರಾಜು ಮತ್ತು ಸೌಲಭ್ಯಗಳ ವಿಷಯದಲ್ಲಿ ಸರಿಯಾದ ಸಿದ್ದತೆ ಅಗತ್ಯ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಈಗಾಗಲೇ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಏಪ್ರಿಲ್ ೨೫ರಿಂದ ೩೦ರ ಅವಧಿಯಲ್ಲಿ ’ಹೊಸ’ ಪ್ರಕರಣಗಳ ಉತ್ತುಂಗವನ್ನು ಕಾಣಬಹುದು. ಇನ್ನೂ ಮೇ ೧ರಿಂದ ೫ರ ಅವಧಿಯಲ್ಲಿ ಒಡಿಶಾ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ, ಮೇ ೬ರಿಂದ ೧೦ರ ಅವಧಿಯಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕೋವಿಡ್ ಸಂಖ್ಯೆ ದ್ವಿಗುಣಗೊಳ್ಳಲಿವೆ.
ಕೆಲ ಮಾಹಿತಿ ಪ್ರಕಾರ, ಮೇ ೧ರಿಂದ ೫ರ ಅವಧಿಯಲ್ಲಿ ದಿನಕ್ಕೆ ಸುಮಾರು ೩.೩ ರಿಂದ ೩.೫ ಲಕ್ಷ ಸೋಂಕುಗಳು ಕಂಡುಬರುತ್ತವೆ. ಮೇ ೧೧ರಿಂದ ೧೫ರ ನಡುವೆ ೧೦ ದಿನಗಳ ನಂತರ ‘ಸಕ್ರಿಯ’ ಪ್ರಕರಣಗಳ ಸಂಖ್ಯೆ ಸುಮಾರು ೩೩ರಿಂದ ೩೫ ಲಕ್ಷಕ್ಕೆ ತಲುಪಲಿವೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸೂಪರ್ ಮಾಡೆಲ್ ನ ಐಐಟಿ ಕಾನ್ಪುರದ ಮನೀಂದ್ರ ಅಗ್ರವಾಲ್ ಈ ಕುರಿತು ಪ್ರತಿಕ್ರಿಯಿಸಿ, ಮಧ್ಯಪ್ರದೇಶ, ಗುಜರಾತ್, ಕೇರಳ ಮತ್ತು ಗೋವಾದ ಪ್ರಕರಣಗಳನ್ನೂ ಸಹ ಪತ್ತೆಹಚ್ಚಲಾಗಿದ್ದರೂ, ಮಾದರಿಯನ್ನು ಸಂಶೋಧನೆ ಒಳಪಡಿಸಲಾಗಿದ್ದು, ಇದರ ಫಲಿತಾಂಶಕ್ಕೆ ಕೆಲವು ದಿನಗಳವರೆಗೆ ಕಾಯಬೇಕು ಎಂದರು.
ಕೋವಿಡ್ -೧೯ ಹರಡುವಿಕೆಯ ತೀವ್ರತೆಯು ಗಣನೆಗಳನ್ನು ಉಲ್ಬಣಗೊಳಿಸಿದೆ. ರಾಜ್ಯಗಳಿಂದ ಹೊಸ ಡೇಟಾದ ಕಾರಣದಿಂದಾಗಿ ನಿಯತಾಂಕ ಮೌಲ್ಯವು ಬದಲಾಗುತ್ತಲೇ ಇರುತ್ತದೆ ಎಂದ ಅವರು, ಕೋವಿಡ್ ಮಾದರಿ ಪರೀಕ್ಷೆಯ ಕೆಲಸ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ.
ಅಲ್ಲದೆ, ಕೆಲ ರಾಜ್ಯಗಳಿಗೆ ಮುಂದಿನ ಒಂದು ತಿಂಗಳಲ್ಲಿ ನಿಮಗೆ ಬೇಕಾದ ಆಸ್ಪತ್ರೆ ಹಾಸಿಗೆಗಳು, ಐಸಿಯುಗಳು, ವೈದ್ಯಕೀಯ ದರ್ಜೆಯ ಆಮ್ಲಜನಕ ಇತ್ಯಾದಿಗಳ ಅಂದಾಜು ನೀಡಲಾಗಿದೆ ಎಂದು ಅಗ್ರವಾಲ್ ಹೇಳಿದರು.