ಮೇದಾರ್ ನಿಗಮಕ್ಕೆ ಕಲ್ಯಾಣ ಕರ್ನಾಟಕದ ಮೇದಾರ್ ಜನಾಂಗದವರನ್ನೇ ಅಧ್ಯಕ್ಷರನ್ನಾಗಿಸಲು ಒತ್ತಾಯ

ಕಲಬುರಗಿ:ಮಾ.11: ಕರ್ನಾಟಕ ಮೇದಾರ್ ನಿಗಮಕ್ಕೆ ಕಲ್ಯಾಣ ಕರ್ನಾಟಕದ ಮೇದಾರ್ ಜನಾಂಗದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಪರಿಶಿಷ್ಟ ಪಂಗಡ ಬುಡಕಟ್ಟು ಮೇದಾರ್ ಸಂಘದ ಮುಖ್ಯ ಸಂಚಾಲಕ ಭೀಮಣ್ಣ ಬೋನಾಳ್ ಅವರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮೇದಾರ್ ನಿಗಮವನ್ನು ರಚಿಸಿದ್ದು ಸ್ವಾಗತಾರ್ಹವಾಗಿದೆ. ಕೂಡಲೇ ಆರ್ಥಿಕ ನೆರವನ್ನು ಪ್ರಕಟಿಸಿ ಪೂರ್ಣ ಪ್ರಮಾಣದಲ್ಲಿ ನಿಗಮವು ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಕೋರಿದರು.
ಮೇದಾರ್ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ಮೇದಾರ್ ಜನಾಂಗದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಹಾಗೂ ನಿಗಮಕ್ಕೆ ಮೈಸೂರು, ಬೆಂಗಳೂರು, ಕಲಬುರ್ಗಿ, ಬೆಳಗಾವಿ ವಿಭಾಗಗಳಿಂದ ಮೇದ ಜನಾಂಗದ ನಾಲ್ವರಿಗೆ ನಿರ್ದೇಶಕರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮೇದಾರ್ ಜನಾಂಗಕ್ಕೆ ತ್ವರಿತವಾಗಿ 500 ಕೋಟಿ ರೂ.ಗಳ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರವು ಕಳೆದ ಫೆಬ್ರವರಿ 10ರಂದು ಮಾಡಿರುವ ಮೇದಾರ್ ಅಭಿವೃದ್ಧಿ ನಿಗಮದ ಆದೇಶದಲ್ಲಿ ಪ್ರವರ್ಗ-1 ಬದಲಾಗಿ ಪರಿಶಿಷ್ಟ ಪಂಗಡ ಎಂದು ಹೊಸ ಆದೇಶ ಹೊರಡಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಎಂ. ಮೇದಾ, ವೀರಪ್ಪಾ ಪ್ಯಾಟಿ, ಲಕ್ಷ್ಮಣ್ ಮೇದಾ, ಶಶಿಕಾಂತ್ ವಕೀಲರು ಸಂಡೂರ್, ಹಣಮಂತಪ್ಪಾ ಬಂದಳ್ಳಿ, ಸಂಜುಕುಮಾರ್ ನಾಗೇಶ್ವರ್, ಮಲ್ಲಪ್ಪ ವಕೀರಲು, ನರಸಪ್ಪಾ ಚಾಮನಾಳ್, ಬಸವರಾಜ್ ಕೊಡೆಕಲ್, ಪ್ರಕಾಶ್ ಮೇದಾ, ಸಾಹೇಬರೆಡ್ಡಿ ಯಾದಗಿರಿ ಮುಂತಾದವರು ಉಪಸ್ಥಿತರಿದ್ದರು.