
ಕೋಲಾರ,ಸೆ,೧೨-ತಾಲೂಕಿನ ವೇಮಗಲ್ ಸಮೀಪದ ಮೇಡಿಹಾಳ ಬಳಿಯಿರುವ ಸ್ವಾಗತ್ ಪುಡ್ ಇಂಡಸ್ಟ್ರೀ ಫ್ಯಾಕ್ಟರಿನಲ್ಲಿ ತಡರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಗೊಂಡಿದ್ದು. ಮಾಲೀಕರು ಮತ್ತು ಸುತ್ತಮುತ್ತಲಿನ ರೈತರು ಭಯಬೀತರಾಗಿದ್ದಾರೆ.
ಇದಕ್ಕೂ ಮುನ್ನ ಕುರುಬರಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಯಾವುದೇ ರೀತಿಯ ಮುಂಜಾಗೃತ ಕ್ರಮ ಕೈಗೊಂಡಿಲ್ಲವೆಂದು ಹೇಳಲಾಗುತ್ತಿದೆ.
ಈ ಭಾಗದಲ್ಲಿ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿರುವ ಕುಟುಂಬಗಳೇ ಹೆಚ್ಚು, ಪ್ರತಿ ನಿತ್ಯ ಕೂಲಿಗೆ ಹೋಗುವ ಇಲ್ಲಿನ ಜನರು ಕುರಿ, ಮೇಕೆ ದನಕರುಗಳನ್ನು ಬೆಟ್ಟದ ತಪ್ಪಲಿನಲ್ಲಿ ಮೇಯಿಸಲು ಕರೆದುಕೊಂಡು ಹೋಗುತ್ತಾರೆ.
ಚಿರತೆ ಪ್ರತ್ಯಕ್ಷದಿಂದ ಪ್ಯಾಕ್ಟರಿಗೆ ಮತ್ತು ಕೂಲಿ ಕೆಲಸಕ್ಕೆ ಬರುವ ರೈತರು ಆತಂಕಕ್ಕೀಡಾಗಿದ್ದಾರೆ. ಚಿರತೆ ಭಯದಿಂದ ಬೆಟ್ಟದ ಹಂಚಿನ ತೋಟಗಳಲ್ಲಿ ಕೆಲಸಕ್ಕೆ ಬರಲು ಜನ ಹಿಂದೇಟು ಹಾಕ್ತಿದ್ದಾರೆ. ಇನ್ನು ಕೆಲವರು ಜಮೀನಿಗೆ ತೆರಳಲು ಕೂಡ ಭಯಭೀತರಾಗಿ ಕೈಯಲ್ಲಿ ದೊಣ್ಣೆ ಕುಡುಗೊಲು ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೂರ್ಯ ಮಲ್ಲೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ, ಸುತ್ತಮುತ್ತಲಿನ ತೋಟಗಳಲ್ಲಿ ಕೆಲಸ ಮಾಡುವವರಿಗೆ ಚಿರತೆಗಳಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಕ್ಕೆ ಅವಕಾಶ ನೀಡದೇ ಅದಷ್ಟು ಬೇಗನೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿದು ಜನರನ್ನು ನೆಮ್ಮದಿಯ ಬದುಕಿಗೆ ಅವಕಾಶ ಮಾಡಿಕೊಡಬೇಕೆಂದು ಮೇಡಿಹಾಳ ಸ್ವಾಗತ್ ಪುಡ್ ಇಂಡಸ್ಟ್ರೀ ಮಾಲೀಕ ನರಸಿಂಹ ಮನವಿ ಮಾಡಿದ್ದಾರೆ.