ಮೇಟಗಳ್ಳಿ ಪೊಲೀಸರಿಂದ ಕುಖ್ಯಾತ ಖದೀಮರ ಬಂಧನ

ಮೈಸೂರು,ಮಾ.19:- 8 ರಾಬರಿ, 4 ಎಕ್ಸ್ ಟಾರ್ಷನ್ , 1 ಕಳ್ಳತನ ಸೇರಿ 13 ಕೇಸುಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಖದೀಮರನ್ನು ಬಂಧಿಸಿದ ಮೇಟಗಳ್ಳಿ ಪೊಲೀಸರು, ಬಂಧಿತರಿಂದ 20 ಸಾವಿರ ಹಣ, 1 ಬೈಕ್, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
22-02-2021 ರಂದು ವ್ಯಕ್ತಿಯೊಬ್ಬರು ವಿಜಯನಗರ 3ನೇ ಹಂತದ ತನ್ನ ಮನೆಯಿಂದ ಕಾರ್ಯನಿಮಿತ್ತ ಪಾಂಡವಪುರಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಬೆಂಗಳೂರು-ಮೈಸೂರು ರಸ್ತೆಯ ಸಿದ್ದಲಿಂಗಪುರದ ಬಳಿ ಕಾರಿಗೆ ಸಣ್ಣ ಶಬ್ದವಾಗಿದ್ದು, ರಸ್ತೆಯಲ್ಲಿ ಬಿದ್ದಿರುವ ಯಾವುದೋ ಕಲ್ಲು ಸಿಡಿದು ಶಬ್ದವಾಗಿರಬಹುದೆಂದು ಹಾಗೆಯೇ ಮುಂದೆ ಸಾಗುತ್ತಿರುವಾಗ ಇದ್ದಕ್ಕಿದ್ದಂತೆ ಒಂದು ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಕಾರನ್ನು ಬೆನ್ನಟ್ಟಿಕೊಂಡು ಬಂದು ಕಾರನ್ನು ಸೈಡಿಗೆ ನಿಲ್ಲಿಸಿ, ಒಬ್ಬಾತ ನೀವು ನಮ್ಮ ಬೈಕಿಗೆ ಹಿಟ್ ಅಂಡ್ ರನ್ ಮಾಡಿ ಬಂದಿದ್ದು ನಮ್ಮ ಬೈಕಿನಲ್ಲಿ ಹಿಂದೆ ಕುಳಿತವನಿಗೆ ಕಾಲು ಮುರಿದು ಹೋಗಿದೆ ನೀವು ಕೂಡಲೇ ಇವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಇಲ್ಲವಾದರೆ ಹಣ ಕೊಡಿ ನಾವು ಚಿಕಿತ್ಸೆ ಪಡೆದುಕೊಳ್ಳುತ್ತೇವೆ, ಇಲ್ಲವಾದರೆ ನಿಮ್ಮ ಮೇಲೆ ಈಗಲೇ ಪೊಲೀಸರಿಗೆ ಹಿಟ್ ಅಂಡ್ ರನ್ ಕೇಸ್ ಕೊಟ್ಟು ಒಳಗೆ ಹಾಕಿಸುತ್ತೇವೆಂದು ಅಡ್ಡಗಟ್ಟಿ ಬಾಯಿಗೆ ಬಂದಂತೆ ಬೈಯ್ದು ಬೆದರಿಕೆ ಒಡ್ಡಿದ್ದ. ಇದೇ ಸಮಯದಲ್ಲಿ ಆ ಬೈಕಿನಲ್ಲಿ ಹಿಂದೆ ಕುಳಿತವನು ತನ್ನ ಒಂದು ಕಾಲಿನ ಮೇಲೆ ನೀರನ್ನು ಹಾಕಿಕೊಂಡು ಕಾಲು ಮುರಿದು ಹೋಗಿದೆ ಎಂಬಂತೆ ನಾಟಕವಾಡಿ ಗೋಳಾಡಿ ಕಿರುಚುತ್ತಾ ಕಾರಿನವನಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದ. ಇದರಿಂದ ಗಾಬರಿಗೊಂಡ ಕಾರು ಚಾಲಕ ತನ್ನ ಬಳಿ ಇದ್ದ 1000 ರೂ ಹಣವನ್ನು ನೀಡಿದ್ದರು. ಆದರೆ ಇವರು ಇದಕ್ಕೆ ಒಪ್ಪದೇ ಎ.ಟಿ.ಎಮ್ ಕಾರ್ಡ್‍ನಿಂದ ಹಣ ಬಿಡಿಸಿಕೊಡು ಎಂದು ಹೆದರಿಸಿದ್ದಾರೆ. ಆದರೆ ಚಾಲಕ ಎ.ಟಿ.ಎಮ್ ಕಾರ್ಡ್ ತಂದಿಲ್ಲವೆಂದಾಗ ಗೂಗಲ್ ಪೇ ಮೂಲಕ ಹಣವನ್ನು ಕಳುಹಿಸು ಎಂದಿದ್ದಾರೆ. ಸಂಬಂಧಿಕರ ಗೂಗಲ್ ಪೇ ನಿಂದ ಇವರ ಹೆಸರಿಗೆ 19,000 ರೂ ಹಣ ಹಾಕಿಸಿದ್ದು, ಆಗ ಇವರುಗಳು ಆತನನ್ನು ಬಿಟ್ಟು ಕಳುಹಿಸಿದ್ದರು.
ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಎಕ್ಸ್ ಟಾರ್ಷನ್ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಇದರ ತನಿಖೆಯನ್ನು ಕೈಗೊಂಡ ಮೇಟಗಳ್ಳಿ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ಬಾತ್ಮೀದಾರರ ಮಾಹಿತಿ ಮೇರೆಗೆ ಈ ಪ್ರಕರಣದ ಆರೋಪಿಗಳಾದ ಜಮೀಲ್ ಖಾನ್ ಬಿನ್ ರೆಹಮತ್ ಉಲ್ಲಾ ಖಾನ್, (28), ರಾಜೇಂದ್ರ ನಗರ, 8ನೇ ಕ್ರಾಸ್, ಕೆಸರೆ, ಮೈಸೂರು, ಶಂಕರ್ ಬಿನ್ ಪುಟ್ಟಸ್ವಾಮಿ( 42), 3ನೇ ಕ್ರಾಸ್, ರಾಜೇಂದ್ರ ನಗರ, ಮೈಸೂರು ಎಂಬವರುಗಳನ್ನು 17-03-2021 ರಂದು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದಾಗ ಇವರುಗಳು ಆ ದಿವಸ ತಮ್ಮ ಟಿ.ವಿ.ಎಸ್ ಪ್ಲೇಮ್ ಎಂಬ ಮೋಟರ್ ಬೈಕಿನಲ್ಲಿ ಸಿದ್ದಲಿಂಗಪುರದ ಬಳಿ ಹೋಗುತ್ತಿದ್ದ ಕಾರಿನ ಹಿಂಭಾಗದ ಡೋರ್‍ಗೆ ಕಾರು ಚಾಲಕನಿಗೆ ಗೊತ್ತಾಗದಂತೆ ಜೋರಾಗಿ ಹೊಡೆದು ಇದನ್ನೇ ಅಪಘಾತವೆಂದು ಭಾವಿಸುವಂತೆ ಮಾಡಿ ಆತನಿಂದ ಹೆದರಿಸಿ ಹಣ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ, ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ 20,000ರೂ.ನಗದು ಹಣ, ಕೃತ್ಯಕ್ಕೆ ಬಳಸಿದ್ದ 01 ಬೈಕ್ ಮತ್ತು 02 ಮೊಬೈಲ್ ಫೋನ್‍ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಇವರುಗಳನ್ನು ವಿಚಾರಣೆಗೊಳಪಡಿಸಿದಾಗ ಒಂದನೇ ಆರೋಪಿ ಜಮೀರ್ ಖಾನ್‍ ನು ಇನ್ನೊಬ್ಬ ಆರೋಪಿ ಮೊಹಮ್ಮದ್ ಜಮೀರ್ ಬಿನ್ ಮಹಮ್ಮದ್ ಗೌಸ್, ರಾಜೇಂದ್ರ ನಗರ ಕೆಸರೆ, ಮೈಸೂರು ಎಂಬವನೊಂದಿಗೆ ಸೇರಿಕೊಂಡು 2017 ರಿಂದ ಇಲ್ಲಿಯವರೆಗೆ ಇದೇ ತರಹದ ಸಾಕಷ್ಟು ಪ್ರಕರಣಗಳನ್ನು ಮಾಡಿರುವುದಾಗಿ ತಿಳಿಸಿದ್ದು ಇವರಿಬ್ಬರುಗಳ ವಿರುದ್ಧ ಮೈಸೂರು ನಗರದ ಕುವೆಂಪು ನಗರ, ವಿ.ವಿ ಪುರಂ, ಜಯಲಕ್ಷ್ಮೀ ಪುರಂ, ಸರಸ್ವತಿ ಪುರಂ, ನರಸಿಂಹರಾಜ ಪೊಲೀಸ್ ಠಾಣೆಗಳಲ್ಲಿ ಮತ್ತು ಇಲವಾಲ ಪೊಲೀಸ್ ಠಾಣೆ, ಮದ್ದೂರು ಪೊಲೀಸ್ ಠಾಣೆ, ಶ್ರೀರಂಗಪಟ್ಟಣ ಗ್ರಾಮಾಂತರ ಹಾಗೂ ಟೌನ್ ಠಾಣೆಗಳಲ್ಲಿ ಬೆಂಗಳೂರಿನ ಚಾಮರಾಜ ಪೇಟೆ ಮತ್ತು ಕುಂಬಳಗೋಡು ಪೊಲೀಸ್ ಠಾಣೆಗಳಲ್ಲಿ ಮತ್ತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ತಲಾ 1 ರಂತೆ ಒಟ್ಟು 12 ರಾಬರಿ, ಎಕ್ಸ್‍ಟಾರ್ಷನ್ ಮತ್ತು ಒಂದು ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿರುತ್ತವೆ.
ಜಮೀಲ್ ಖಾನ್‍ನು ಈ ಬಾರಿ ಶಂಕರ್ ಎಂಬ ಹೊಸಬನನ್ನು ಕರೆದುಕೊಂಡು ಈ ಕೃತ್ಯವನ್ನು ಮಾಡಿ ಸಿಕ್ಕಿ ಬಿದ್ದಿದ್ದು ಈಗ ಇವರಿಬ್ಬರ ವಿರುದ್ಧ ಮೇಟಗಳ್ಳಿ ಠಾಣೆಯಲ್ಲಿ ಎಕ್ಸ್‍ಟಾರ್ಷನ್ ಮತ್ತು ಬೆದರಿಕೆ ಪ್ರಕರಣ ದಾಖಲಾಗಿರುತ್ತದೆ. ಈ ಆರೋಪಿಗಳು ಬೆಂಗಳೂರು- ಮೈಸೂರು ರಸ್ತೆ, ಶ್ರೀರಂಗಪಟ್ಟಣ, ಮೈಸೂರು ನಗರದ ಸುತ್ತಲಿನ ರಿಂಗ್ ರಸ್ತೆ ಸೇರಿದಂತೆ ಮೈಸೂರು ನಗರದ ಇನ್ನೂ ಕೆಲವು ಪ್ರಮುಖ ರಸ್ತೆಗಳಲ್ಲಿ ಇನ್ನೂ ಸಾಕಷ್ಟು ಈ ತರಹದ ಪ್ರಕರಣಗಳನ್ನು ಮಾಡಿ, ಸಾರ್ವಜನಿಕರಿಂದ ಹಣ ಮತ್ತು ಚಿನ್ನದ ಚೈನು/ಉಂಗುರಗಳನ್ನು ದೋಚಿದ್ದು, ಕೆಲವು ಸಾರ್ವಜನಿಕರು ಈ ಕುರಿತಂತೆ ಸಂಬಂಧಿಸಿದ ಠಾಣೆಗಳಿಗೆ ದೂರು ನೀಡದೇ ಇರುವುದರಿಂದ ಕೆಲವು ಪ್ರಕರಣಗಳು ಬೆಳಕಿಗೆ ಬಾರದೇ ಉಳಿದಿದ್ದು ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.ಗಳಾದ ಡಾ. ಎ.ಎನ್. ಪ್ರಕಾಶ್‍ ಗೌಡ, ಗೀತಪ್ರಸನ್ನ ಹಾಗೂ ನರಸಿಂಹರಾಜ ವಿಭಾಗದ ಎ.ಸಿ.ಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆಯ ಇನ್ಸ ಪೆಕ್ಟರ್ ಎ.ಮಲ್ಲೇಶ್, ಪಿ.ಎಸ್.ಐ ಅವರುಗಳಾದ ವಿಶ್ವನಾಥ್, ನಾಗರಾಜ ನಾಯಕ್ ಮತ್ತು ಎ.ಎಸ್.ಐ ಪೊನ್ನಪ್ಪ, ಮಹದೇವ್ ಸಿಬ್ಬಂದಿಯವರಾದ ದಿವಾಕರ್, ಪ್ರಶಾಂತ್, ಬಸವರಾಜು, ಲಿಖಿತ್, ಆಶಾ ಮಾಡಿರುತ್ತಾರೆ.