ಮೇಘಾಲಯ ಸಿಎಂ ಆಗಿ ನಾಳೆ ಸಂಗ್ಮಾ ಪ್ರಮಾಣ ವಚನ

ಶಿಲ್ಲಾಂಗ್,ಮಾ.೬- ಮೇಘಾಲಯ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ- ಎನ್‌ಪಿಪಿ ಮೈತ್ರಿಕೂಟಕ್ಕೆ ೪೫ ಶಾಸಕರ ಬೆಂಬಲ ವ್ಯಕ್ತವಾಗಿದ್ದು ಎನ್‌ಪಿಪಿ ಅಧ್ಯಕ್ಷ ಕಾನ್ರಾಡ್ ಕೆ ಸಂಗ್ಮಾ ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಬಳಿಕ ನಾಗಾಲ್ಯಾಂಡ್ ಮತ್ತು ತ್ರಿಪುರಾಕ್ಕೂ ಪ್ರಧಾನಿ ಭೇಟಿ ನೀಡಲಿದ್ದಾರೆ.

ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ಕೂಟ ಕಾನ್ರಾಡ್ ಕೆ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ- ಎನ್‌ಪಿಪಿ ಗೆ ಬೆಂಬಲ ಸೂಚಿಸಿದ ಹಿನ್ನೆಲ್ಲೆಯಲ್ಲಿ ೬೦ ವಿಧಾನಸಭೆಯಲ್ಲಿ ಸಂಖ್ಯಾಬಲ ೪೫ಕ್ಕೆ ಏರಿಕೆಯಾಗಿದೆ.

ಈ ನಡುವೆ ರಾಜ್ಯಪಾಲ ಫಗು ಚೌಹ್ಹಾಣ್ ಅವರನ್ನು ಭೇಟಿ ಮಾಡಿ ೩೨ ಶಾಸಕರೊಂದಿಗೆ ಬಿಜೆಪಿ ಬೆಂಬಲಿತ ಎನ್‌ಪಿಪಿ ನೇತೃತ್ವದ ಮೈತ್ರಿಯು ಮೇಘಾಲಯದಲ್ಲಿ ಕಾನ್ರಾಡ್ ಕೆ ಸಂಗ್ಮಾ ಅವರ ನೇತೃತ್ವದಲ್ಲಿ ಮುಂದಿನ ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ.

ಶಾಸಕರ ಪ್ರಮಾಣ ವಚನ:

ಮೇಘಾಲಯ ಚುನಾವಣಾ ಫಲಿತಾಂಶದ ಕೆಲವು ದಿನಗಳ ನಂತರ, ಹೊಸದಾಗಿ ಆಯ್ಕೆಯಾದ ನೂತನ ಶಾಸಕರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.

೫೯ ಸದಸ್ಯರನ್ನು ಹೊಂದಿರುವ ವಿಧಾನಸಭೆಯಲ್ಲಿಮಂದು ಹಂಗಾಮಿ ಸ್ಪೀಕರ್ ಅವರು ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ಸ್ಪೀಕರ್ ಆಯ್ಕೆಗಾಗಿ ಮಾರ್ಚ್ ೯ ರಂದು ಸದನ ಮತ್ತೆ ಸಭೆ ಸೇರಲಿದೆ.

ಪಿಡಿಎಫ್ ಶಾಸಕರು, ಬ್ಯಾಂಟೆಡೋರ್ ಲಿಂಗ್ಡೋಹ್ ಮತ್ತು ಗೇವಿನ್ ಮೈಲಿಮ್ಂಗಪ್ ಸಂಗ್ಮಾ ಅವರ ನಿವಾಸದಲ್ಲಿ ಹಗಲಿನಲ್ಲಿ ಭೇಟಿಯಾಗಿ ಬೆಂಬಲ ಪತ್ರ ನೀಡಿದ್ದಾರೆ.