ಮೇಘಾಲಯ ಪ್ರಜಾಸತಾತ್ಮಕ ಒಕ್ಕೂಟ: ಎನ್‌ಪಿಪಿಗೆ 8 ,ಯುಡಿಪಿಗೆ 2, ಬಿಜೆಪಿ, ಎಚ್‌ಎಸ್‌ಪಿಡಿಪಿಗೆ ತಲಾ 1 ಸ್ಥಾನ ಹಂಚಿಕೆ

ಶಿಲ್ಲಾಂಗ್ ಮಾ. 6- ಹೊಸ ಸರ್ಕಾರ ರಚಿಸಲಿರುವ ಮೈತ್ರಿಕೂಟಕ್ಕೆ ‘ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ 2.0’ ಎಂದು ಹೆಸರಿಸಲಾಗುವುದು ಎಂದು ನ್ಯಾಷನಲ್ ಪೀಪಲ್ಸ್ ಪಾರ್ಟಿ – ಎನ್‌ಪಿಪಿ ರಾಷ್ಟ್ರೀಯ ಅಧ್ಯಕ್ಷ ಕಾನ್ರಾಡ್ ಕೆ ಸಂಗ್ಮಾ ಹೇಳಿದ್ದಾರೆ.

ಮೈತ್ರಿಕೂಟದ ಶಾಸಕರಿಗೆ ವಿಧಾನಸಭೆಯಲ್ಲಿ ಗಳಿಸಿದ ಸ್ಥಾನಗಳ ಆಧಾರದ ಮೇಲೆ ಎನ್‌ಪಿಪಿಗೆ ಎಂಟು, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಗೆ ಎರಡು ಮತ್ತು ಬಿಜೆಪಿ) ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗೆ ತಲಾ ಒಂದು ಸಚಿವ ಸ್ಥಾನಗಳು ಸಿಗಲಿವೆ ಎಂದು ಅವರು ತಿಳಿಸಿದ್ದಾರೆ.

ಶಿಲ್ಲಾಂಗ್‌ನಲ್ಲಿ ನಡೆದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮಿತ್ರ ಪಕ್ಷಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.”12 ಸಂಪುಟ ಸ್ಥಾನಗಳ ಪೈಕಿ ಮುಖ್ಯಮಂತ್ರಿ ಸೇರಿದಂತೆ ನಾಲ್ವರು ಗಾರೋ ಹಿಲ್ಸ್ ಪ್ರದೇಶದಿಂದ ಮತ್ತು ಎಂಟು ಖಾಸಿ-ಜೈನ್ತಿಯಾ ಹಿಲ್ಸ್ ಪ್ರದೇಶದಿಂದ ಬರುತ್ತಾರೆ” ಎಂದು ತಿಳಿಸಿದ್ದಾರೆ.

ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ 2.0 ಮೈತ್ರಿಕೂಟದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಇರಲಿದ್ದಾರೆ ಎಂದು ಹೇಳಿದ್ದಾರೆ.

ಯುಡಿಪಿ ಅಧ್ಯಕ್ಷ ಮೆಟ್ಬಾಹ್ ಲಿಂಗ್ಡೋಹ್ ಮಾತನಾಡಿ, ಸರ್ಕಾರ ರಚಿಸಲು ಯುಡಿಪಿ ಎನ್‌ಪಿಪಿಗೆ ತನ್ನ ಬೆಂಬಲ ನೀಡಿದೆ.ಯುಡಿಪಿ ಮತ್ತು ಪಿಡಿಎಫ್ ಎನ್‌ಪಿಪಿಗೆ ನಮ್ಮ ಬೆಂಬಲ ನೀಡಿದ್ದೇವೆ” ಎಂದು ಹೇಳಿದ್ದಾರೆ.

ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ:

ಕಾನ್ರಾಡ್ ಸಂಗ್ಮಾ ನೇತೃತ್ವದ ಮೈತ್ರಿಕೂಟದ ಬಲ ಈಗ 45 ಕ್ಕೆ ಏರಿದೆ ಮತ್ತು ಎನ್‌ಪಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಅವರು ಮಾರ್ಚ್ 7 ರಂದು ಸತತ ಎರಡನೇ ಅವಧಿಗೆ ಮೇಘಾಲಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ಬಿಜೆಪಿ, ಎಚ್‌ಎಸ್‌ಪಿಡಿಪಿಯ ಇಬ್ಬರು ಶಾಸಕರು ಮತ್ತು ಇಬ್ಬರು ಸ್ವತಂತ್ರ ಶಾಸಕರು ಎನ್‌ಪಿಪಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಶಿಲ್ಲಾಂಗ್‌ನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗವಹಿಸಲಿದ್ದಾರೆ.