ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಮತದಾನ ಬಿರುಸು

ನವದೆಹಲಿ.ಫೆ.೨೭-ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆಗೆ ಭಾರಿ ಬಿಗಿ ಭದ್ರತೆಯಲ್ಲಿ ಶಾಂತಿಯುತ ಮತ್ತು ಬಿರುಸಿನ ಮತದಾನ ನಡೆದಿದೆ. ಹೊತ್ತು ಕಳೆಯುತ್ತಿದ್ದಂತೆ ಎರಡೂ ರಾಜ್ಯಗಳಲ್ಲಿ ಮಧ್ಯಾಹ್ನದ ವೇಳೆಗೆ ಶೇ.೫೦ಕ್ಕೂ ಹೆಚ್ಚು ಮತದಾನವಾಗಿದೆ.
ಮೇಘಾಲಯದ ೬೦ ಕ್ಷೇತ್ರಗಳ ಪೈಕಿ ತಲಾ ೫೯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ೩೬ ಮಹಿಳೆಯರೂ ಸೇರಿ ೩೬೯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.೨೧.೬ ಲಕ್ಷ ಅರ್ಹ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ನಾಗಾಲ್ಯಾಂಡ್ ನ ೫೯ ಕ್ಷೇತ್ರಗಳಿಗೆ ಚುನಾವಣೆ ಮತದಾನ ನಡೆಯುತ್ತಿದ್ದು ೧೩.೧೭ ಲಕ್ಷ ಮತದಾರಿದ್ದಾರೆ.೨೩೫೧ ಮತಗಟ್ಟೆ ತೆರೆಯಲಾಗಿದೆ. ಬೆಳಿಗ್ಗೆ ೭ ರಿಂದ ಸಂಜೆ ೪ ಗಂಟೆ ತನಕ ಮತದಾನ ನಡೆಯಲಿದೆ. ಈ ಎರಡೂ ರಾಜ್ಯಗಳಲ್ಲಿ ಮಾರ್ಚ್ ೨ ರಂದು ಮತ ಎಣಿಕೆ ನಡೆಯಲಿದೆ.
ಮೇಘಾಲಯದ ಸೋಹಿಯಾಂಗ್ ಕ್ಷೇತ್ರದಲ್ಲಿ ಅಭ್ಯರ್ಥಿ ಸಾವಿನ ನಂತರ ಮತದಾನ ಮುಂದೂಡಲಾಗಿದೆ. ನಾಗಾಲ್ಯಾಂಡ್‌ನ ಅಕುಲುಟೊ ಕಾಂಗ್ರೆಸ್ ಪ್ರತಿಸ್ಪರ್ಧಿ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಓರ್ವ ಬಿಜೆಪಿ ಶಾಸಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಪ್ರಾದೇಶಿಕ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದೆ. ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿಯೊಂದಿಗಿನ ಭಿನ್ನಾಭಿಪ್ರಾಯದ ನಂತರ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.ಈ ಬಾರಿ ಶಾಸಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಮೇಘಾಲಯದಲ್ಲಿ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ), ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಜೊತೆಗೆ ಕಣದಲ್ಲಿವೆ.
ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಮತ್ತು ಇತರ ಹಲವಾರು ಕಾಂಗ್ರೆಸ್ ಶಾಸಕರ ಪಕ್ಷಾಂತರದ ನಂತರ ತೃಣಮೂಲ ರಾಜ್ಯದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಕಳೆದ ಬಾರಿ ೨೧ ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾದಲ್ಲಿದೆ.
೨೦೧೮ ರಲ್ಲಿ, ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿತು, ಆದರೆ ಎನ್ ಪಿಪಿ ಯೊಂದಿಗೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. ಭ್ರಷ್ಟಾಚಾರದ ಆರೋಪದ ಮೇಲೆ ಕಾರ್ನಾಡ್ ಸಂಗ್ಮಾ ಅವರ ಪಕ್ಷದೊಂದಿಗೆ ಭಿನ್ನಾಭಿಪ್ರಾಯದ ನಂತರ ಈ ಬಾರಿ ಅದು ೬೦ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ನಾಗಾಲ್ಯಾಂಡ್ ರಾಜ್ಯದ ೬೦ ವಿಧಾನಸಭಾ ಕ್ಷೇತ್ರಗಳ ಪೈಕಿ ೫೯ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ೨೦೧೮ ರಲ್ಲಿ ರಾಜ್ಯದ ೬೦ ಸ್ಥಾನಗಳ ಪೈಕಿ ೧೨ ಸ್ಥಾನ ಗೆದ್ದಿದ್ದ ಬಿಜೆಪಿ, ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಎನ್‌ಡಿಪಿಪಿ ೪೦ ಮತ್ತು ಬಿಜೆಪಿ ೨೦ ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಬಿಜೆಪಿ ಈಗಾಗಲೇ ಅವಿರೋಧವಾಗಿ ಓರ್ವ ಶಾಸಕ ಆಯ್ಕೆಯಾಗಿದ್ದು ತನ್ನ ಖಾತೆ ತೆರೆದಿದೆ,ಏಕೈಕ ಎದುರಾಳಿ ತನ್ನ ಉಮೇದುವಾರಿಕೆ ಹಿಂತೆಗೆದುಕೊಂಡ ನಂತರ ಬಿಜೆಪಿ ಅಭ್ಯರ್ಥಿ ಕಜೆಟೊ ಕಿನಿಮಿ ಅಕುಲುಟೊ ವಿಧಾನಸಭಾ ಕ್ಷೇತ್ರದಿಂದ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಮತ್ತು ನಾಗಾ ಪೀಪಲ್ಸ್ ಫ್ರಂಟ್ ೨೩ ಮತ್ತು ೨೨ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಅಗತ್ಯವಿದ್ದರೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಬಹುದು ಎಂದು ಕಾಂಗ್ರೆಸ್ ಹೇಳಿದೆ.
ನಾಗಾಲ್ಯಾಂಡ್‌ನಲ್ಲಿ ಈ ಬಾರಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರಿದ್ದು ಆಯ್ಕೆಯಾದ ಮೊದಲ ಮಹಿಳಾ ಶಾಸಕಿಯಾಗಿದ್ದಾರೆ.

ಮೋದಿ ಮನವಿ
ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದ್ದು ಜನರು ತಮ್ಮ ಸಂವಿಧಾನಬದ್ದ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಜ್ಯಗಳು ಮತದಾರಿಗೆ ಮನವಿ ಮಾಡಿದ್ದಾರೆ.
ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ಬೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಜ್ಯಗಳ ಜನರು ತಮ್ಮ ಸಂವಿಧಾನಬದ್ದ ಹಕ್ಕನ್ನು ಚಲಾಯಿಸಿ ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡುವ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ. ಈಗಾಗಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿ ಎಂದು ಹೇಳಿದ್ದಾರೆ.
ಎರಡು ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್ ನ ತಲಾ ೬೦ ಕ್ಷೇತ್ರಗಳ ಪೈಕಿ ೫೯ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ ೭ ರಿಂದ ಸಂಜೆ ೪ ಗಂಟೆಯ ತನಕ ಮತದಾನ ನಡೆಯಲಿದೆ.
ಭಾರಿ ಭದ್ರತೆ;
ಈಶಾನ್ಯ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಎರಡೂ ರಾಜ್ಯಗಳಲ್ಲಿ ಬಾರಿ ಸಂಖ್ಯೆಯ ಭದ್ರತಾ ಪಡೆಯನ್ನು ನಿಯೋಜನೆ ಮಾಡಿದೆ.