ಮೇಗಾ ಲೋಕ್ ಅದಾಲತ್‌ನಲ್ಲಿ ೨೩,೬೭೯ ಪ್ರಕರಣ ಇತ್ಯರ್ಥ- ಮಲ್ಲಿಕಾರ್ಜುನ ಗೌಡ

ರಾಯಚೂರು, ಮಾ.೨೮- ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಮೇಗಾ ಲೋಕ್ ಅದಾಲತ್‌ನಲ್ಲಿ ೨೩,೬೭೯ ಅರ್ಹ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಒಟ್ಟಾರೆ ೧೨,೪೨,೯೦,೦೫೯ ರೂಪಾಯಿಗಳ ಪರಿಹಾರವನ್ನು ಸಂಬಂಧಿಸಿದವರಿಗೆ ಪಾವತಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಅವರು ತಿಳಿಸಿದರು.
ಅವರು ಮಾ.೨೭ರ ಶನಿವಾರ ನಗರದ ಜಿಲ್ಲಾ ನ್ಯಾಯಾಲಯಗಳ ಸಂಕಿರ್ಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೇಗಾ ಲೋಕ್ ಅದಾಲತ್ ಕಾರ್ಯಕ್ರಮದ ಅಂತಿಮ ದಿನದಲ್ಲಿ ಅದಾಲತ್ ಪೂರ್ಣಗೊಂಡ ನಂತರ ಈ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟಾರೆ ೩೯,೫೪೩ ಪ್ರಕರಣಗಳು ಬಾಕಿ ಉಳಿದಿದ್ದವು, ಅವುಗಳಲ್ಲಿ ರಾಜಿ ಸಂಧಾನದಡಿ ಬರುವ ೨೩ ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ಗುರುತಿಸಲಾಗಿತ್ತು, ಆ ಪೈಕಿ ೨೩,೬೭೯ ಪ್ರಕರಣಗಳನ್ನು ಈ ಬಾರಿಯ ಮೇಗಾ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಲೋಕ್ ಅದಾಲತ್ ಮೂಲಕ ಸಾಕಷ್ಟು ಪ್ರಕರಣಗಳು ಇತ್ಯರ್ಥವಾಗುತ್ತಿರುವುದು ಸಕರಾತ್ಮಕ ಬೆಳವಣಿಗೆಯಾಗಿದ್ದು, ರಾಜೀ ಸಂಧಾನ ಸೂತ್ರ ಯಶಸ್ವಿಯಾಗುತ್ತಿದೆ, ನ್ಯಾಯಾಲಯದಲ್ಲಿ ದಾಖಲಾದ ಕೆಲವು ಪ್ರಕರಣಗಳಲ್ಲಿ ವಿಚಾರಣೆ ನಡೆಸಬೇಕಿರುತ್ತದೆ, ಅದಕ್ಕೆ ಸಮಯಾವಕಾಶವೂ ಬೇಕಾಗುತ್ತದೆ, ಆ ಸಂದರ್ಭದಲ್ಲಿ ವಿಳಂಬವೂ ಆಗಬಹುದು, ಆದರೆ ರಾಜಿ ಸಂಧಾನಕ್ಕೆ ಅರ್ಹವಿರುವ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಮಧ್ಯಸ್ಥಿಕೆದಾರರು ಹಾಗೂ ಉಭಯ ಕಕ್ಷಿಗಾರರ ಸಮ್ಮುಖದಲ್ಲಿ ಪರಸ್ಪರ ರಾಜೀ ಸಂಧಾನಗಳ ಮೂಲಕ ಇತ್ಯರ್ಥ ಪಡಿಸಬಹುದಾಗಿದೆ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿಯೂ ಜರುಗಿದೆ, ಕಳೆದ ಸಾಲಿಗಿಂತ ಈ ಬಾರಿ ಲೋಕ್ ಅದಾಲತ್‌ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಕ್ಷಿದಾರರಿಗೆ ರಾಜೀ ಸಂಧಾನ ಮೂಲಕ ಪ್ರಕರಣ ಇತ್ಯರ್ಥ ಪಡಿಸುವ ಸಂದರ್ಭದಲ್ಲಿ ಮನಸ್ಸಿನಾಳದಲ್ಲಿ ತೃಪ್ತಿ ಉಂಟಾಗುತ್ತದೆ, ಸಾರ್ವಜನಿಕರು ಲೋಕ್ ಅದಾಲತ್ ಸದುಪಯೋಗ ಪಡದುಕೊಳ್ಳಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರು, ಮಧ್ಯಸ್ಥಿಕೆದಾರರು, ಕಕ್ಷಿಗಾರರು, ವಕೀಲರು ಇದ್ದರು.