ಮೇಕೆದಾಟು ಯೋಜನೆ ನಾಳೆ ಸಿಎಂ ಸಭೆ

ಬೆಂಗಳೂರು, ಮೇ ೨೬- ಮೇಕೆದಾಟು ಯೋಜನೆಯ ಸಂಬಂಧ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕಾನೂನು ತಜ್ಞರ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಗೃಹ, ಕಾನೂನು ಹಾಗೂ ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಟೌನ್‌ಹಾಲ್ ಬಳಿ ಸಂಚಾರ ಪೊಲೀಸರಿಗೆ ರೈನ್‌ಕೋಟ್, ಫೇಸ್‌ಶೀಲ್ಡ್ ಮತ್ತು ಗ್ಲೌಸ್, ಮೊಬೈಲ್ ವೇರಿಯಬಲ್ ಮೊಬೈಲ್ ಮೆಸೇಜಿಂಗ್ ಸಿಸ್ಟಂ ವಿತರಿಸಿ ಮಾತನಾಡಿದ ಅವರು, ಮೇಕೆ ದಾಟು ಯೋಜನೆಯಲ್ಲಿ ಪರಿಸರಕ್ಕೆ ತೊಂದರೆಯಾಗಿಎಯೇ ಎಂಬ ಕುರಿತು ಪರಿಶೀಲನೆ ನಡೆಸಲು ಚೆನ್ನೈನಲ್ಲಿರುವ
ರಾಷ್ಟ್ರೀಯ ಹಸಿರು ಪೀಠ ದಿನಪತ್ರಿಕೆಯೊಂದರ ಸುದ್ದಿಯನ್ನಾಧರಿಸಿ ಸ್ವಯಂ ಪ್ರೇರಣೆಯಿಂದ ರಚನೆ ಮಾಡಿರುವ ಸಮಿತಿ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಿದೆ ಎಂದರು.
ಕಾನೂನಾತ್ಮಕ ಹೋರಾಟದ ಸ್ವರೂಪ, ಸಿದ್ಧತೆ ಬಗ್ಗೆ ತೀರ್ಮಾನಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕಾನೂನು ತಜ್ಞರ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
ನಾಳಿನ ಸಭೆಯಲ್ಲಿ ರಾಜ್ಯದ ಅಡ್ವಕೇಟ್ ಜನರಲ್, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂತರ್ ರಾಜ್ಯ ಜಲ ವಿವಾದದ ಕಾನೂನು ಪಂಡಿತರು, ಹಿರಿಯ ವಕೀಲರು ಪಾಲ್ಗೊಳ್ಳಲಿದ್ದು, ಮೇಕೆ ದಾಟು ಯೋಜನೆಯ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಈಗಾಗಲೇ ಮೇಕೆ ದಾಟು ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್‌ಗೆ ಎಲ್ಲ ವಿವರವನ್ನು ನೀಡಲಾಗಿದೆ. ಕರ್ನಾಟಕ ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಮಿತಿ ರಚನೆ ಮಾಡಿರುವುದು ಕಾನೂನು ಬದ್ಧವೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದರು.