ಮೇಕೆದಾಟು ಯೋಜನೆಗೆ ಹೋರಾಟ ಮಾಡಲಿ: ಡಿಕೆಶಿ

ಬೆಂಗಳೂರು, ಸೆ. ೪- ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ರೈತರ ಹಿತರಕ್ಷಣೆಗೆ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇವೆ. ರೈತರ ಹಿತಕಾಯಲು ನಾವು ಬದ್ಧ. ನ್ಯಾಯಾಲಯದಲ್ಲೂ ಹೋರಾಟವನ್ನು ಮುಂದುವರೆಸುತ್ತೇವೆ ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಾವೇರಿ ನೀರಿಗಾಗಿ ಈಗ ಹೋರಾಟ ನಡೆಸುತ್ತಿರುವ ಸಂಘಟನೆಗಳು ಕಾಂಗ್ರೆಸ್ ನೀರಿಗಾಗಿ ನಡಿಗೆ ಕಾರ್ಯಕ್ರಮ ಮಾಡಿದ್ದಾಗ ಎಲ್ಲಿಗೆ ಹೋಗಿದ್ದವು. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕೇಂದ್ರದ ವಿರುದ್ಧ ಹೋರಾಟ ಮಾಡಲಿ ಎಂದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರಿನ ವಿಚಾರದಲ್ಲಿ ವಾಸ್ತವ ಪರಿಸ್ಥಿತಿ ಗೊತ್ತಿದ್ದರೂ ಬಿಜೆಪಿ ಮತ್ತು ಜೆಡಿಎಸ್ ರಾಜಕಾರಣ ಮಾಡುತ್ತಿದೆ. ನಾವು ಇದರಲ್ಲಿ ರಾಜಕಾರಣ ಮಾಡಲು ಬಯಸುವುದಿಲ್ಲ. ಕಾವೇರಿ ಸಮಸ್ಯೆಗೆ ಮೇಕೆದಾಟು ಒಂದೇ ಪರಿಹಾರ ಎಂದರು.
ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ಹಾಗೂ ಹೋರಾಟ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳು ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಕೇಂದ್ರವನ್ನು ಏಕೆ ಒತ್ತಾಯಿಸುತ್ತಿಲ್ಲ. ಇವರೆಲ್ಲಾ ಕೇಂದ್ರಕ್ಕೆ ಹೋಗಿ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲಿ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವ ಬದಲು ಕೇಂದ್ರದ ವಿರುದ್ಧ ಹೋರಾಟ ಮಾಡಲಿ ಎಂದು ಹೇಳಿದರು.
ಈ ಹಿಂದೆ ಬಿಜೆಪಿ-ಜೆಡಿಎಸ್ ಅಧಿಕಾರದಲ್ಲಿದ್ದಾಗ ಈ ರೀತಿಯ ಸಂಕಷ್ಟ ಪರಿಸ್ಥಿತಿ ಎಂದೂ ಎದುರಾಗಿರಲಿಲ್ಲ. ಕಾವೇರಿ ನದಿ ಭಾಗದಲ್ಲಿ ಮಳೆ ಕೊರತೆಯಾಗಿದೆ. ಪರಿಸ್ಥಿತಿಯನ್ನು ನ್ಯಾಯಾಲಯಕ್ಕೂ ಮನವರಿಕೆ ಮಾಡಿದ್ದೇವೆ. ತಮಿಳುನಾಡಿನವರು ನಿತ್ಯ ೨೪ ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕೇಳಿದ್ದರು. ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ೩ ಸಾವಿರ ಕ್ಯೂಸೆಕ್ಸ್ ಮಾತ್ರ ಬಿಡಲು ಸಾಧ್ಯ ಎಂದು ವಾದ ಮಾಡಿದ್ದೇವು. ಈ ಪರಿಣಾಮ ಪ್ರಾಧಿಕಾರ ನಿತ್ಯ ೫ ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶಿಸಿದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತರಕ್ಷಣೆ ಮಾಡಿದ್ದೇವೆ. ಇನ್ನು ಮಳೆ ಬರಬೇಕು ಅಷ್ಟೆ ಎಂದರು.
ಕಾಂಗ್ರೆಸ್ ಸರ್ಕಾರ ಬ್ಲಾಕ್‌ಮೇಲ್ ಮಾಡಿ ಶಾಸಕರನ್ನು ಸೆಳೆಯುತ್ತಿದೆ ಎಂಬ ಮಾಜಿ ಸಚಿವ ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಬ್ಲಾಕ್‌ಮೇಲ್ ಸಂಸ್ಕೃತಿ ಬಗ್ಗೆ ನವರಂಗಿ ನಾರಾಯಣ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿ, ಇದಕ್ಕೆ ನಮ್ಮ ಎಂ.ಬಿ. ಪಾಟೀಲರು ಸರಿಯಾಗಿ ಉತ್ತರ ನೀಡಿದ್ದಾರೆ ಎಂದರು.