ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಎಚ್‌ಡಿಡಿ ಆಗ್ರಹ

ಬೆಂಗಳೂರು, ಜ. ೧೩- ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.
ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಕೇಂದ್ರದ ಜಲಶಕ್ತಿ ಮಂತ್ರಾಲಯದ ಜಲಸಂಪನ್ಮೂಲ ಸಂಸದೀಯ ಸ್ಥಾಯಿ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಸಭೆಯಲ್ಲಿ ಪಾಲ್ಗೊಂಡು ಮೇಕೆದಾಟು ಯೋಜನೆಯ ಅನುಷ್ಠಾನದ ಅಗತ್ಯತೆಯನ್ನು ಪ್ರತಿಪಾದಿಸಿದ್ದೇನೆ. ಮೇಕೆದಾಟು ಯೋಜನೆ ಕೇವಲ ಕುಡಿಯುವ ನೀರಿನ ಯೋಜನೆ. ಇದು ನೀರಾವರಿಗೆ ನೀರು ಒದಗಿಸುವ ಯೋಜನೆಯಲ್ಲ ಹಾಗಾಗಿ ಮೇಕೆದಾಟು ಯೋಜನೆಗೆ ಮಂಜೂರಾತಿ ದೊರಕಿಸಿಕೊಡುವಂತೆ ಒತ್ತಾಯಿಸಿದ್ದೇನೆ ಎಂದರು.
ಈ ಸಭೆಯಲ್ಲಿ ಕಾವೇರಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಹೇಳಿದ್ದೇನೆ. ಕಾವೇರಿ ನೀರು ಜಲ ವಿವಾದದ ನ್ಯಾಯಮಂಡಳಿ ನೀಡಿರುವ ತೀರ್ಮಾನದಲ್ಲಿ ಉದ್ಭವಿಸಿರುವ ಸಮಸ್ಯೆಗಳು ಮತ್ತು ಸುಪ್ರೀಂಕೋರ್ಟ್ ತೀರ್ಮಾನದಿಂದ ಕಾವೇರಿ ನದಿ ಕಣಿವೆಯಲ್ಲಿರುವ ನೀರಾವರಿ ಯೋಜನೆಗಳಾದ ವಾಟೆಹೊಳೆ, ಹೇಮಾವತಿ, ಹಾರಂಗಿ, ಕೆಆರ್‌ಎಸ್. ಕಬಿನಿ ಮುಂತಾದ ನೀರಾವರಿ ಯೋಜನೆಗಳಿಂದ ಹಾಸನ, ತುಮಕೂರು, ಮಂಡ್ಯ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ರೈತರಿಗೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಲಾಗಿದೆ ಎಂದು ಅವರು ಹೇಳಿದರು.ಕಾವೇರಿ ಜಲವಿವಾದ ಮಂಡಳಿ ಏಕಪಕ್ಷೀಯವಾಗಿ ೧೯೯೧ ರ ಮೇ ೨೫ ರಂದು ಮಧ್ಯಂತರ ಆದೇಶ ನೀಡಿ ಕರ್ನಾಟಕ ರಾಜ್ಯ ತನ್ನ ನೀರಾವರಿ ಅಚ್ಚುಕಟ್ಟನ್ನು ೧೧.೨೦ ಲಕ್ಷ ಹೆಕ್ಟೇರ್‌ಗಳಿಗೆ ಸ್ಥಿಮಿತಗೊಳಿಸುವಂತೆ ಮತ್ತು ತಮಿಳುನಾಡಿಗೆ ೨೦೫ ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸಭೆಯಲ್ಲಿ ಮಾತನಾಡಿದ್ದನೆ. ಬರಗಾಲದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಆದೇಶದಿಂದ ರಾಜ್ಯಕ್ಕೆ ಆಗಿರುವ ಸಂಕಷ್ಟ ಎಲ್ಲವನ್ನು ಹೇಳಿದ್ದೇನೆ ಎಂದರು.
ರಾಜ್ಯದ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆಯೂ ಸಭೆಯಲ್ಲಿ ಒತ್ತಾಯಿಸಿರುವುದಾಗಿ ಅವರು ಹೇಳಿದರು.
ನಮ್ಮ ರಾಜ್ಯದ ಜಲಾಶಯಗಳಿಂದ ನಮಗೆ ನೀರೇತ್ತಲು ಅವಕಾಶ ಇಲ್ಲ. ಈ ತಾರತಮ್ಯದ ಬಗ್ಗೆಯೂ ಪ್ರಶ್ನೆ ಮಾಡಿದ್ದೇನೆ ಎಂದು ಅವರು ಹೇಳಿದರು.