ಮೇಕೆದಾಟು:ತುರ್ತು ವಿಚಾರಣೆಗೆ ಸುಪ್ರೀಂ ನಕಾರ, ತ.ನಾಡಿಗೆ ಹಿನ್ನಡೆ

ನವದೆಹಲಿ, ಜು.20- ಕರ್ನಾಟಕ ಸರ್ಕಾರದ ಉದ್ದೇಶಿತ ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸರ್ಕಾರ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲು ನಿರಾಕರಿಸಿರುವ ಸುಪ್ರೀಂಕೋರ್ಟ್ , ಮುಂದಿನ ವಿಚಾರಣೆಯನ್ನು ಜುಲೈ 26 ಕ್ಕೆ ಮುಂದೂಡಿದೆ.
ಹೀಗಾಗಿ ಕಾನೂನು ಸಮರದಲ್ಲಿ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಕರ್ನಾಟಕ ಸರ್ಕಾರದ ಉದ್ದೇಶಿತ ಮೇಕೆದಾಟು ಯೋಜನೆಯ ಯೋಜನಾ ವರದಿಗೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಯಾವುದೇ ಆದೇಶ ಅಥವಾ ನಿರ್ದೇಶನವನ್ನು ನೀಡದಂತೆ ತಮಿಳುನಾಡು ಸರ್ಕಾರ ಕಳೆದ ವಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ಕುರಿತು ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿತ್ತು.
ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಸಭೆ ಸೇರಲಿದೆ.
ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ವಕೀಲರೊಂದಿಗೆ ಚರ್ಚೆ ನಡೆಸಿದ್ದರು. “ನ್ಯಾಯಾಲಯದಲ್ಲಿ ನಮ್ಮ ವಾದಗಳು ನ್ಯಾಯೋಚಿತವಾಗಿವೆ ಮತ್ತು ನ್ಯಾಯಾಲಯದಿಂದ ಅನುಕೂಲಕರ ಆದೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದರು.

ದೊರೈಮುರುಗನ್ ಜೂನ್ 22 ರಂದು ನವದೆಹಲಿಗೆ ಪಕ್ಷದ ನಾಯಕರ ನಿಯೋಗದೊಂದಿಗೆ ತೆರಳಿದ್ದರು. ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿರುವುದರಿಂದ ಅಣೆಕಟ್ಟು ಯೋಜನೆ ಕುರಿತು ಯಾವುದೇ ಚರ್ಚೆಗೆ ಅವಕಾಶ ನೀಡದಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದರು.