ಮೆ 22 ರಿಂದ ಬೆಳಗಾವಿ ಸಂಪುರ್ಣ ಲಾಕ್‍ಡೌನ್

ಬೆಳಗಾವಿ, ಮೇ.19: ಜಿಲ್ಲೆಯಲ್ಲಿ ಕೋರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಶನಿವಾರ ಮೇ.22 ಬೆಳಿಗ್ಗೆ 06.00 ಗಂಟೆಯಿಂದ ಮೇ.24 ಸೋಮವಾರ ಬೆಳಿಗ್ಗೆ 06.00 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮೇ. 24 ರ ಬೆಳಿಗ್ಗೆ 06.00 ಗಂಟೆಯವರೆಗೆ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ಸಂಪೂರ್ಣವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರಡಿ ನಿಷೇಧಿಸಿ ಆದೇಶಿಸಲಾಗಿತ್ತು.
ಆದರೆ, ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಾರಾಂತ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ:
ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸಂಚರಿಸಲು, ಅಗತ್ಯ ವಸ್ತುಗಳಾದ ಹಾಲು, ಔಷಧಿ ಪೂರೈಕೆ ಮತ್ತು ಖರೀದಿಗೆ ಹಾಗೂ ಅಂತರ್‍ರಾಜ್ಯ ಹಾಗೂ ಅಂತರ್ ಜಿಲ್ಲೆಗಳಿಗೆ ಸಂಚರಿಸುವ ಸರಕು ಮತ್ತು ಸಾಗಾಣಿಕಾ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಆದೇಶದಲ್ಲಿ ಸೂಚಿಸಿರುವ ದಿನಗಳಂದು ಈಗಾಗಲೇ ಪೂರ್ವಾನುಮತಿ ಪಡೆದುಕೊಂಡು ನಿಗದಿಪಡಿಸಿರುವಂತಹ ಮದುವೆ
ಸಮಾರಂಭಗಳಿಗೆ ಮಾತ್ರ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ :
ಸಂಪೂರ್ಣ ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾಗಿರುವ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ.