ಮೆಹಬೂಬಾ ಬಂಧನ ವಿಸ್ತರಣೆ;ಚಿದು ಆಕ್ರೋಶ

ನವದೆಹಲಿ,ಆ.೧- ಮೆಹಬೂಬಾ ಮುಫ್ತಿ ಅವರ ಬಂಧನ ವಿಸ್ತರಣೆ ಕುರಿತಂತೆ ಕೇಂದ್ರಾಡಳಿತ ಪ್ರದೇಶ ಕೈಗೊಂಡಿರುವ ನಿರ್ಧಾರ ಜನರ ಸಾಂವಿಧಾನಿಕ ಹಕ್ಕುಗಳ ಮೇಲಿನ ಆಕ್ರಮಣ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.
ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಒತ್ತಾಯಿಸಿದ್ದಾರೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಗಡಿಯಾರದ ಸುತ್ತ ಭದ್ರತಾ ಸಿಬ್ಬಂದಿಯಡಿ ಸಂರಕ್ಷಿತ ವ್ಯಕ್ತಿ ಎಂದು ಚಿದಂಬರಂ ಅವರು ಹೇಳಿದ್ದು, ಇದು ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಚಿದಂಬರಂ ಪ್ರಶ್ನಿಸಿದ್ದಾರೆ.
ಮೆಹಬೂಬಾ ಮುಫ್ತಿ ಅವರ ಬಂಧನದ ಅವಧಿ ವಿಸ್ತರಿಸುವುದನ್ನು ಖಂಡಿಸಿರುವ ಚಿದಂಬರಂ, ಜಮ್ಮು ಮತ್ತು ಕಾಶ್ಮೀರದ ಆಡಳಿತದ ನಿರ್ಧಾರ ಸಾಂವಿಧಾನಿಕ ಹಕ್ಕುಗಳ ಮೇಲಿನ ಆಕ್ರಮಣ ಎಂದಿದ್ದಾರೆ.
ಪೀಪಲ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮುಫ್ತಿ ಅವರನ್ನು ೨೦೧೯ರ ಆ. ೫ ರಂದು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನದಲ್ಲಿಡಲಾಗಿದೆ. ಅವರ ಬಂಧನವನ್ನು ಕೇಂದ್ರ ಪ್ರದೇಶಾಡಳಿತ ಮತ್ತೆ ಮೂರು ತಿಂಗಳು ವಿಸ್ತರಿಸಿದೆ.
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಮೆಹಬೂಬಾ ಮುಫ್ತಿ ಅವರ ಬಂಧನ ವಿಸ್ತರಣೆ ಕಾನೂನು ದುರುಪಯೋಗ ಪ್ರತಿಯೊಬ್ಬ ನಾಗರಿಕನಿಗೂ ಖಾತ್ರಿಪಡಿಸುವ ಸಾಂವಿಧಾನಿಕ ಹಕ್ಕುಗಳ ಮೇಲಿನ ಆಕ್ರಮಣ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಯಾವುದೇ ಸ್ವಾಭಿಮಾನಿ ರಾಜಕೀಯ ಮುಖಂಡರು ನಿರಾಕರಿಸುವ ಷರತ್ತುಗಳ ಮೇಲೆ ಅವರನ್ನು ಬಿಡುಗಡೆ ಮಾಡುವ ಪ್ರಸ್ತಾವವನ್ನು ಅವರು ತಿರಸ್ಕರಿಸಿದರು.
ಮುಫ್ತಿ ಬಂಧನಕ್ಕೆ ಅವರ ಪಕ್ಷದ ಧ್ವಜದ ಬಣ್ಣ ಕಾರಣ ಎಂದಿರುವುದು ನಗು ತರಿಸುತ್ತದೆ. ೩೭೦ನೇ ವಿಧಿಯನ್ನು ರದ್ದುಪಡಿಸಿರುವುದರ ವಿರುದ್ಧ ಮುಫ್ತಿ ಏಕೆ ಮಾತನಾಡಲು ಸಾಧ್ಯವಿಲ್ಲ ಮತ್ತು ಅದು ವಾಕ್‌ಸ್ವಾತಂತ್ರದ ಹಕ್ಕಿನ ಭಾಗವಲ್ಲವೇ? ಎಂದು ಅವರು ಕೇಳಿದ್ದಾರೆ.
೩೭೦ನೇ ವಿಧಿ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಹಾಜರಾಗುವ ವಕೀಲರಲ್ಲಿ ನಾನೂ ಒಬ್ಬ, ನಾನು ೩೭೦ ವಿಧಿ ವಿರುದ್ಧ ಮಾತನಾಡಿದರೆ ಅದು ಸಾರ್ವಜನಿಕ ಸುರಕ್ಷತೆಗೆ ಅಪಾಯವಾಗಲಿದೆಯೇ?ಈ ಕುರಿತಂತೆ ನಾವು ಒಟ್ಟಾಗಿ ನಮ್ಮ ಧ್ವನಿಯನ್ನು ಹೆಚ್ಚಿಸಬೇಕು. ಮೆಹಬೂಬಾ ಮುಫ್ತಿಯನ್ನು ತಕ್ಷಣವೇ ಬಿಡುಗಡೆ ಮಾಡುವ ಬೇಡಿಕೆ ಇಡಬೇಕೆಂದು ಅವರು ಹೇಳಿದರು.
ಆ. ೫ ರಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಅವರ ಬಂಧನ ಮುಕ್ತಾಯಗೊಳ್ಳಲು ದಿನಾಂಕ ನಿಗದಿಪಡಿಸಲಾಗಿತ್ತು. ಇನ್ನೂ ಕೆಲ ರಾಜಕೀಯ ನಾಯಕರು ಕೂಡ ಬಂಧನದಲ್ಲಿದ್ದಾರೆ.