ಮೆರಗು ತಂದ ಮಹಿಳಾ ಉತ್ಸವ ಕಾರ್ಯಕ್ರಮ

ಸಿರವಾರ.ನ.೧೦- : ಮಹಿಳೆ ಕುರಿತಾದ ಆರೋಗ್ಯಕರ ಚರ್ಚೆಗಳಿಂದ ಸ್ವಸ್ಥ ಸಮಾಜವನ್ನು ನಾವು ನಿರ್ಮಾಣ ಮಾಡಬೇಕಾಗಿದೆ. ಅದ್ದರಿಂದ ಪ್ರತಿಯೊಬ್ಬರೂ ಸಾಂಸ್ಕೃತಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸುಕ್ಷೇತ್ರ ಕಲ್ಲೂರು ಶ್ರೀ ಗುರು ಅಡವೀಶ್ವರ ಮಠದ ಶಂಭುಲಿಂಗ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಗಣದಿನ್ನಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಿರ್ವಚನದಲ್ಲಿ
ಭಾರತದ ಸಂಸ್ಕೃತಿ, ಪರಂಪರೆ ಅಳಿವು ಉಳಿವು ಮಹಿಳೆ ಮೇಲಿದೆ. ಮುಂದಿನ ಪೀಳಿಗೆಗೆ ಮಹಿಳೆಯ ಪಾತ್ರ ಬಹಳ ಮುಖ್ಯವಾಗಿದೆ. ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ಹೆಣ್ಣು ಮಕ್ಕಳು ದೇವತಾ ಸ್ವರೂಪಿಗಳು. ಪ್ರತಿಯೊಬ್ಬರು ಹೆಣ್ಣನ್ನು ಗೌರವಿಸಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಮಹಿಳೆಯು ಪ್ರಾಮಾಣಿಕತೆ, ಶಿಸ್ತು ಮತ್ತು ನಿಷ್ಠೆಯ ಸಂಕೇತ. ಭೂಮಿಯಷ್ಟೇ ಸಹನೆಯನ್ನು ಮಹಿಳೆ ಹೊಂದಿದ್ದಾಳೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಮಂಗಲಾ ವೆಂ ನಾಯಕ ಅವರು, ಗಾದೆ ಮಾತುಗಳು , ಜಾನಪದ ಕಲೆಗಳು, ನೃತ್ಯ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ಎಲ್ಲಾ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರವಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದರೆ. ಯಾವುದರಲ್ಲೂ ಕಡಿಮೆ ಇಲ್ಲದಂತೆ ಸ್ವಾವಲಂಬಿಯಾಗಿ ದುಡಿದು ಬದುಕುತ್ತಿದ್ದಾರೆ. ಮಹಿಳೆಯರ ಪ್ರಗತಿಯಲ್ಲಿ ಪುರುಷರ ಪಾತ್ರವೂ ಇದೆ ಎಂದು ಸ್ಮರಿಸಿದರು.ಮಹಿಳಾ ಸಾಂಸ್ಕೃತಿಕ ಉತ್ಸವದ ಪ್ರಯುಕ್ತ ಗ್ರಾಮದ ಮಹಿಳೆಯರಿಗೆ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಹಿಳೆಯರು ವಿವಿಧ ರೀತಿಯ ರಂಗೋಲಿ‌ ಜೊತೆಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ರಂಗೋಲಿ ಚಿತ್ರ ಎಲ್ಲರ ಗಮನಸೆಳೆದವು. ಈ ರಂಗೋಲಿ ಸ್ಪರ್ಧೆ ಗ್ರಾಮದ ಅನಿತಾ ಪಾಟೀಲ್ ಅವರ ಉಸ್ತುವಾರಿಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಜಯಲಕ್ಷ್ಮಿ ಮಂಗಳಮೂರ್ತಿ, ರೈತ ಸಂಪರ್ಕ ಹಾಗೂ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಫವೀದಾ ಬೇಗಂ, ಸುಕೇಂದ್ರ ರೆಡ್ಡಿ ಗೌಡ, ಡ್ರೈವರ್ ರಂಗಣ್ಣ‌ ನಾಯಕ, ಈರಣ್ಣ ನಾಯಕ, ಸುಗೂರಯ್ಯ‌ ಸ್ವಾಮಿ ಹಿರೇಮಠ, ಶರಣಯ್ಯ ಸ್ವಾಮಿ ಮತ್ತು ಬಸನಗೌಡ ಪೋ.ಪಾಟೀಲ್ ಸೇರಿದಂತೆ ಗಣದಿನ್ನಿ ಗ್ರಾಮದ ಹಿರಿಯರು ಹಾಗೂ ಕಿರಿಯರು ಉಪಸ್ಥಿತರಿದ್ದರು.