ಮೆದೇಹಳ್ಳಿ ಪಿಡಿಓ ವಿರುದ್ದ ಆಕ್ರೋಶ: ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ

ಚಿತ್ರದುರ್ಗ,ಏ.22: ಮೆದೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಅಧಿಕಾರಿಯ ಅವ್ಯವಹಾರ, ಅಕ್ರಮಗಳ ವಿರುದ್ಧ ಇಂದು ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡಸಿದರು.
ಚಿತ್ರದುರ್ಗ ತಾಲ್ಲೂಕು ಮೆದೇಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಸಂತೋಷ್ ಕುಮಾರ್ ರವರು ಕಾನೂನನ್ನು ಉಲ್ಲಂಘಿಸಿ ಅಕ್ರಮ ಕೆಲಸಗಳನ್ನು ಮಾಡುತ್ತಿದ್ದಾರೆ. ಪಂಚಾಯಿತಿಗೆ ಬರುವ ರೆವಿನ್ಯೂ ಹಣವನ್ನು ಬ್ಯಾಂಕಿಗೆ ಜಮಾ ಮಾಡದೇ ದುರುಪಯೋಗ ಮಾಡುತ್ತಿದ್ದಾರೆ. ಪಂಚಾಯಿತಿ ಮಳಿಗೆಗಳನ್ನು ಜನರಲ್ ಬಾಡಿಯ ಗಮನಕ್ಕೆ ತರದೇ, ಹರಾಜು ಪ್ರಕ್ರಿಯೆ ಮಾಡದೇ ತಮ್ಮ ಇಚ್ಚಾನುಸಾರ ಬಾಡಿಗೆಗೆ ನೀಡುತ್ತಿದ್ದು, ಆ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪಾರ್ಕ್, ಯು.ಜಿ.ಡಿಗಳನ್ನು ಮಾಡದೆ, ಹೊಸ ಲೇ ಔಟ್ ಗಳನ್ನು ನಿರ್ಮಾಣ ಮಾಡಲು ಲಂಚ ಪಡೆದು ಕಾನೂನು ಬಾಹಿರವಾಗಿ ಅನುಮತಿ ನೀಡುತ್ತಿದ್ದಾರೆ.  ಪಾರ್ಕ್ ಒತ್ತುವರಿ ಮಾಡಲಾಗಿದೆ ಎಂದು ದೂರು ನೀಡಿದ್ದರು ಕೂಡ ಕ್ರಮ ಕೈಗೊಂಡಿಲ್ಲ . ಅಧ್ಯಕ್ಷರಿಗೆ ಕೆಟ್ಟ ಹೆಸರು ಬರಲಿ ಎಂದು ಗ್ರಾ.ಪಂ.ನೌಕರರಿಗೆ ವೇತನ ನೀಡುತ್ತಿಲ್ಲ ಆದ್ದರಿಂದ ಕೂಡಲೇ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಂತರ ಇಓ ಆಧಿಕಾರಿ ಹನುಂತಪ್ಪ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿ ಪಂಚಾಯಿತಿ ಬೀಗ ತೆಗೆಸಿದರು.