ಮೆದೆ ಹಾಕಿದ್ದ ಮೂರುವರೆ ಎಕರೆ ಹುಲ್ಲು ನಾಶ

ಕೆ.ಆರ್.ಪೇಟೆ. ಏ.03:- ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಇಬ್ಬರು ರೈತರು ಪಶುಪಾಲನೆ ಮಾಡುವ ಉದ್ದೇಶದಿಂದ ಖರೀದಿಸಿ ತಂದು ಮೆದೆ ಹಾಕಿದ್ದ ಮೂರುವರೆ ಎಕರೆ ಹುಲ್ಲು ಕಿಡಿಗೇಡಿಗಳ ಅಟ್ಟಹಾಸಕ್ಕೆ ಬಲಿಯಾಗಿದೆ.
ಹೊಸಕೋಳಲು ಗ್ರಾಮದ ವಿಜಯನಗರ ಬಡಾವಣೆಯ ನೀರಿನ ಟ್ಯಾಂಕ್ ಪಕ್ಕದಲ್ಲಿ ಹೇಮಣ್ಣ ಎಂಬುವರಿಗೆ ಸೇರಿದ ಒಂದು ಎಕರೆ ಮತ್ತು ಗೋವಿಂದ ಎಂಬುವವರ ಸೇರಿದ ಎರಡುವರೆ ಎಕರೆ ಹುಲ್ಲು ಇಬ್ಬರ ಹುಲ್ಲನ್ನು ಅಕ್ಕಪಕ್ಕದಲ್ಲಿ ಮೆದೆ ಹಾಕಲಾಗಿತ್ತು. ಭಾನುವಾರ ಬೆಳಗಿನ ವೇಳೆ ಕಿಡಿಗೇಡಿಗಳು ಹಳೆ ಬಟ್ಟೆಗಳಿಗೆ ಬೆಂಕಿ ಹಾಕಿದ್ದಾರೆ. ಇದು ಸ್ವಲ್ಪ ಸಮಯದ ನಂತರ ಸಮೀಪದಲ್ಲಿಯೇ ಇದ್ದ ಜೋಡಿ ಹುಲ್ಲಿನ ಮೆದೆಗಳಿಗೆ ತಲುಪಿದೆ. ಬೆಂಕಿಯ ಕೆನ್ನಾಲಿಗೆಗೆ ಭತ್ತದ ಹುಲ್ಲು ಆಹುತಿಯಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪಟ್ಟಣದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಶಿವಣ್ಣ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಲ್ಲಿಸುವ ಕಾರ್ಯ ಮಾಡುವ ವೇಳೆಗೆ ಮೂರುವರೆ ಎಕರೆಯ ಭತ್ತದ ಹುಲ್ಲು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಪಶುಪಾಲನೆ ಮಾಡುವ ಉದ್ದೇಶದಿಂದ ತಮ್ಮ ಹಸುಗಳಿಗೆ ಕೆಲ ದಿನಗಳ ಹಿಂದೆಯಷ್ಟೇ ಭತ್ತದ ಹುಲ್ಲನ್ನು ಖರೀದಿಸಿ ಮೆದೆ ಹಾಕಲಾಗಿತ್ತು. ಹುಲ್ಲು ಬೆಂಕಿಗೆ ಆಹುತಿ ಆಗಿರುವುದರಿಂದ ಗೋವಿಂದ ಎಂಬವರಿಗೆ 75,000 ಹಾಗೂ ಹೇಮಣ್ಣ ಎಂಬವರಿಗೆ 25000 ನಷ್ಟವಾಗಿದ್ದು ಕೂಡಲೇ ತಾಲೂಕು ಆಡಳಿತ ಪರಿಶೀಲನೆ ನಡೆಸಿ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಕುಟುಂಬಗಳು ತಾಲೂಕು ಆಡಳಿತವನ್ನು ಒತ್ತಾಯಿಸಿವೆ.