ಮೆದುಳಿನ ಆರೋಗ್ಯ ಕಾಪಾಡುವುದರಿಂದ ಮರೆವಿನ ಕಾಯಿಲೆ ದೂರ

ಕಲಬುರಗಿ: ಸೆ.21:ವಯಸ್ಸಾದಂತೆ ನೆನಪಿನ ಶಕ್ತಿ ಕಳೆದುಕೊಂಡು ಮರೆವು ಆವರಿಸುವುದು ಸಹಜ. ವಾಯುವಿಹಾರ, ಯೋಗ, ಧ್ಯಾನ, ಪ್ರಾರ್ಥನೆ, ಸೂಕ್ತ ಆಹಾರ ಮತ್ತು ವಿಶ್ರಾಂತಿ ಪದ್ಧತಿ, ಸಕ್ಕರೆ ಸೇವನೆ ಮಾಡದಿರುವುದು, ಮೆದುಳಿನ ಆರೋಗ್ಯ ರಕ್ಷಣೆ, ಒಂಟಿತನದಿಂದ ದೂರವಿರುವುದು, ಕುಟುಂಬ ಹಾಗೂ ಸಮಾಜದ ಸಕಾರಾತ್ಮಕ ಪ್ರಭಾವದ ಮುಂತಾದ ಮುಂಜಾಗ್ರತಾ ಕ್ರಮಗಳ ಮೂಲಕ ಮರೆವು ಕಾಯಿಲೆಯಿಂದ ದೂರವಿರಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಮರೆವು ಕಾಯಿಲೆ ನಿವಾರಣೆ ದಿನಾಚರಣೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಮರೆವು ಕಾಯಿಲೆಯವರು ಬಹುತೇಕವಾಗಿ ಯಾವುದೇ ವಿಷಯಗಳು, ವಸ್ತುಗಳನ್ನು ಮರೆತು ಬಿಡುತ್ತಾರೆ. ಅರಳು-ಮರಳಾಗಿ ವರ್ತಿಸುವುದು, ಜ್ಞಾಪಕ ಶಕ್ತಿ ಕುಂದುವುದು, ಮೆದುಳಿನ ಜೀವಕೋಶಗಳ ನಾಶ, ತಾರ್ಕಿಕ ಶಕ್ತಿ ನಾಶದಂತಹ ಲಕ್ಷಣಗಳು ಮರೆವು ರೋಗದ ಲಕ್ಷಣಗಳಾಗಿವೆ. ರೋಗಿಗಳನ್ನು ಕೀಳಾಗಿ ಕಾಣುವುದು ಬೇಡ. ಅವರ ಜೊತೆ ಆಪ್ತವಾಗಿ ವರ್ತಿಸಬೇಕು. ತಜ್ಞರ ಪ್ರಕಾರ ನೂರರಲ್ಲಿ ಇಬ್ಬರಿಗೆ ಕಾಡುವ ಕಾಯಿಲೆ ಇದಾಗಿದ್ದು, ಆರಂಭದಲ್ಲಿ ಇದರ ಲಕ್ಷಣಗಳನ್ನು ಗುರ್ತಿಸಿ, ಸೂಕ್ತ ಜೀವನಶೈಲಿಯ ಬದಲಾವಣೆಯ ಮೂಲಕ ಮರೆವು ಕಾಯಿಲೆ ಬರದಂತೆ ತಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ಮಂಗಲಾ ಚಂದಾಪುರೆ, ಶ್ರೀದೇವಿ, ಚಂದಮ್ಮ ಮರಾಠಾ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.