ಮೆಣಸಿನಕಾಯಿಗೆ ಥ್ರಿಪ್ಸ ನುಶಿಯ ಕಾಟದಿಂದ ರಕ್ಷಿಸಬಹುದು

ಇಂಡಿ:ಜೂ.2:ಹಿಂಗಾರು ಹಂಗಾಮಿನಲ್ಲಿ ಹಸಿರು ಅಥವಾ ಕೆಂಪು ಮೆಣಸಿನಕಾಯಿಗೆ ಥ್ರಿಪ್ಸ ನುಶಿಯ ಕಾಟ ತಗುಲುತ್ತಿದ್ದು ರೈತರು ಕೀಟನಾಶಕ ಉಪಯೋಗಿಸಿ ನಿಯಂತ್ರಿಸ ಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರಕಾಶ ಹೇಳಿದರು.

ತಾಲೂಕಿನ ಪುರಸಭೆ ಆಧೀನದಲ್ಲಿರುವ ಸಾತಪುರ ಗ್ರಾಮದ ನಿಂಗಪ್ಪ ರೂಗಿ ಇವರ ತೋಟದಲ್ಲಿ ಹಸಿರು ಮೆಣಸಿನಕಾಯಿ ತೋಟ ವೀಕ್ಷಿಸಿ ಮಾತನಾಡುತ್ತಿದ್ದರು.

ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ ಹೂಗಳ ಒಳಗೆ ಮತ್ತು ಹೊರಗೆ ಕಂಡು ಬರುತ್ತವೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವೀಣಾ ಮಾತನಾಡಿ ಮೆಣಸಿನಕಾಯಿ ಬೆಳೆಯಲ್ಲಿ ಬಾಧಿತ ಎಲೆಯ ಕುಡಿಗಳನ್ನು ಕತ್ತರಿಸಿ ನಾಶಪಡಿಸುವದು ಇಲ್ಲವೆ ಪ್ರತಿ ಎಕರೆಗೆ 25-30 ನೀಲಿ ಅಂಟು ಬಲೆಗಳನ್ನು ಮೆಣಸಿನಕಾಯಿ ಬೆಳೆಯಲ್ಲಿ ನೇತು ಹಾಕಿ ಕೀಟಗಳನ್ನು ಆಕರ್ಷಿಸಿ ನಾಶ ಪಡಿಸಬಹುದು ಇಲ್ಲವೆ ಸಾವಯುವ ಕ್ರಮವಾಗಿ ಬೇವಿನ ಬೀಜದ ಕಷಾಯ 5% ಅಥವಾ ಶೇ. 3 ರ ಬೇವಿನ ಎಣ್ಣೆ ಪ್ರತಿ ಲೀಟರ್ ನೀರಿಗೆ 2 ಮೀ.ಲೀ ಯಂತೆ ಬೆರೆಸಿ ಸಿಂಪಡಿಸಬಹುದು ಎಂದರು.

ರೈತರಾದ ನಿಂಗಪ್ಪ ರೂಗಿ,ಶಿವಪ್ಪ ಕಟ್ಟಿಮನಿ,ಸಿದ್ರಾಮ ರೂಗಿ,ಮಾಳಪ್ಪ ಗುಡ್ಲ, ಕಾಳಪ್ಪ ರೂಗಿ, ಶರಣಪ್ಪ ರೂಗಿ ಮತ್ತಿತರಿದ್ದರು.