ಮೆಟ್ರೋ ರೈಲಿಗೆ ತಲೆಕೊಟ್ಟವಿದ್ಯಾರ್ಥಿಯ ಭೀಕರ ದೃಶ್ಯ ಸೆರೆ

ಬೆಂಗಳೂರು,ಮಾ.೨೩- ಅತ್ತಿಗುಪ್ಪೆ ಮೆಟ್ರೋ ರೈಲು ಹಳಿಗೆ ಹಾರಿ ನ್ಯಾಷನಲ್ ಲಾ ಸ್ಕೂಲ್‌ನ ಪ್ರಥಮ ವರ್ಷದ ವಿದ್ಯಾರ್ಥಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಕೊನೆ ಕ್ಷಣದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ. ಕಳೆದ ಮಾ.೨೧ರ ಮಧ್ಯಾಹ್ನ ೨:೧೦ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಧ್ರುವ, ರೈಲು ಬರುವುದನ್ನೇ ಕಾದು ನಿಂತಿದ್ದ. ಮಧ್ಯಾಹ್ನದ ಸಮಯವಾಗಿದ್ದರಿಂದ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚು ಇರಲಿಲ್ಲ. ರೈಲು ಬರುವ ಜಾಗದಲ್ಲೇ ಕೆಲ ಹೊತ್ತು ಒಬ್ಬನೇ ನಿಂತಿದ್ದ ಧ್ರುವ ಅಲ್ಲೆ ಅತ್ತಿಂದಿತ್ತ ಓಡಾಡಿದ್ದ.
ನಂತರ ಆತನ ಸಂಪೂರ್ಣ ಗಮನ ರೈಲಿನ ಕಡೆಗೆ ತಿರುಗಿತ್ತು. ರೈಲು ಬರುವುದನ್ನೇ ದಿಟ್ಟಿಸಿ ನೋಡುತ್ತಿದ್ದ ಧ್ರುವ,(೧೯) ಇನ್ನೇನು ರೈಲು ನಿಲ್ದಾಣಕ್ಕೆ ಸಮೀಪಿಸಬೇಕು ಎಂದಾಗ ಒಮ್ಮೆ ಸುತ್ತಲು ಕಣ್ಣಾಡಿಸಿ ಯಾವುದೇ ಭಯವಾಗಲಿ, ಆತಂಕವಾಗಲಿ ಇಲ್ಲದೇ ಹಳಿಗೆ ಇಳಿದಿದ್ದ. ಕೆಳಗಿಳಿದವನೇ ನೇರ ಹಳಿಗೆ ತಲೆಕೊಟ್ಟು ಮಲಗಿಬಿಟ್ಟಿದ್ದ.
ನೋಡ ನೋಡುತ್ತಿದ್ದ ರೈಲು ಆತನ ತಲೆಯನ್ನೇ ಕತ್ತರಿಸಿತ್ತು. ರೈಲಿನಡಿ ಸಿಲುಕಿದ ಧ್ರುವನ ದೇಹ ಹಾಗೂ ತಲೆ ಎರಡು ತುಂಡಾಗಿತ್ತು. ಧ್ರುವ ಟ್ರ್ಯಾಕ್ಟ್‌ಗಿಳಿದು ರೈಲಿಗೆ ತಲೆಕೊಟ್ಟಿದ್ದನ್ನು ಎದುರಿನ ನಿಲ್ದಾಣದಲ್ಲಿ ಕುಳಿತು ಫೋನ್‌ನಲ್ಲಿ ಮಾತನಾಡುತ್ತಿದ್ದ ಯುವತಿ ಕಂಡು ಹೌಹಾರಿದ್ದಳು. ಆಕೆ ಕೂಗಿ ಸಿಬ್ಬಂದಿಯನ್ನು ಕರೆಯುವಷ್ಟರಲ್ಲಿ ರೈಲು ಹರಿದಿತ್ತು. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟ್ರ್ಯಾಕ್ ಮೇಲೆ ಬಿದ್ದಿದ್ದ ಮೃತದೇಹವನ್ನು ಹೊರ ತೆಗೆಯಲು ಮೆಟ್ರೋ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟಿದ್ದರು. ಮುಂಬಯಿ ಮೂಲದ ಧ್ರುವ ಯಾಕಾಗಿ ಆತ್ಮಹತ್ಯೆಗೆ ಶರಣಾದ ಎಂಬುದು ತಿಳಿದು ಬಂದಿಲ್ಲ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸಿದ್ದಾರೆ.
ಮಾನಸಿಕ ಖಿನ್ನತೆ:
ಮೆಟ್ರೋ ಹಳಿಗೆ ಜಿಗಿದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಮಾನಸಿಕ ಖಿನ್ನತೆಯೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು,ನಿನ್ನೆ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.ಮೃತ ಧೃವ್ ಮೊದಲ ತ್ರೈಮಾಸಿಕ ಪರೀಕ್ಷೆಯಲ್ಲಿ ಎ-ಗ್ರೇಡ್ ಪಡೆದಿದ್ದ. ಎರಡನೇ ತ್ರೈಮಾಸಿಕ ಪರೀಕ್ಷೆಯಲ್ಲಿ ಸಿ-ಗ್ರೇಡ್ ಪಡೆದಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಧೃವ್, ಕಡಿಮೆ ಅಂಕ ಗಳಿಸಿರುವ ಬಗ್ಗೆ ಪೋಷಕರಿಗೂ ತಿಳಿಸಿದ್ದ.ಹೀಗಾಗಿ ತಿಂಗಳ ಹಿಂದೆಯಷ್ಟೇ ತಂದೆ ಮುಂಬೈನಿಂದ ನಗರಕ್ಕೆ ಬಂದು ಧೃವ್‌ಗೆ ಚಿಕಿತ್ಸೆ ಕೊಡಿಸಿ ತೆರಳಿದ್ದರು. ಆದರೂ ಧೃವ್ ಈ ಮಾನಸಿಕ ಖಿನ್ನತೆಯಿಂದ ಹೊರಗೆ ಬಂದಿರಲಿಲ್ಲ. ಕೊನೆಗೆ ಆತ್ಮಹತ್ಯೆ ನಿರ್ಧಾರ ಮಾಡಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಸ್ಕ್ರೀನ್ ಡೋರ್ ಗೆ ಒತ್ತಡ:
ಮೆಟ್ರೋ ನಿಲ್ದಾಣಗಳಲ್ಲಿ ಸಾಲು ಸಾಲು ಆತ್ಮಹತ್ಯೆ ಪ್ರಕರಣ ವರದಿ ಆದ ಬೆನ್ನಲ್ಲೇ ಫ್ಲಾಟ್ ಫಾರ್ಮ್‌ಗಳಲ್ಲಿ ಸ್ಕ್ರೀನ್ ಡೋರ್ ಅಳವಡಿಕೆಗೆ ಒತ್ತಾಯ ಕೇಳಿ ಬಂದಿವೆ. ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಸ್ಕ್ರೀನ್ ಡೋರ್ ವ್ಯವಸ್ಥೆಗೆ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಭದ್ರತಾ ಸಿಬ್ಬಂದಿ ಹೆಚ್ಚಿಸುವುದರ ಜತೆಗೆ ಪ್ರಯಾಣಿಕರ ಸುರಕ್ಷತೆಗಾಗಿಯು ಗಾರ್ಡರ್ ಅಳವಡಿಕೆಗೆ ನಿರ್ಧರಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ನಿಲ್ದಾಣ ಮಾತ್ರವಲ್ಲದೇ ಎಲ್ಲಾ ನಿಲ್ದಾಣಗಳಿಗೂ ಸಿಬ್ಬಂದಿ ಹೆಚ್ಚಳಕ್ಕೆ ಚಿಂತನೆ ನಡೆದಿದೆ. ಇನ್ನೂ ಅತ್ತಿಗುಪ್ಪೆ ಪ್ರಕರಣದಲ್ಲಿ ವಿದ್ಯಾರ್ಥಿ ಧ್ರುವ ನಿಲ್ದಾಣದ ಪ್ರಾರಂಭದ ಕಾರ್ನರ್ ಬಳಿ ನಿಂತು ಹಳಿಗೆ ಜಿಗಿದಿದ್ದ. ಹೀಗಾಗಿ ಸ್ಟೇಷನ್ ಕಾರ್ನರ್ ಬಳಿ ಸಂಪೂರ್ಣ ತಡೆಗೋಡೆ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಉನ್ನತ ಮೂಲಗಳು ಮಾಹಿತಿ ನೀಡಿವೆ. ಕೆಲವೆಡೆ ಈಗಾಗಲೇ ಅಳವಡಿಕೆ ಮಾಡಲಾಗಿದ್ದು, ಮುಂದುವರಿದ ಭಾಗವಾಗಿ ಮತ್ತಷ್ಟು ನಿಲ್ದಾಣದಲ್ಲೂ ಅಳವಡಿಸಲು ಯೋಜನೆ ರೂಪಿಸಲಾಗಿದೆ.