ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಬಲಿ

ಬೆಂಗಳೂರು, ಜ.೧೭- ಮೆಟ್ರೋ ಕಾಮಗಾರಿಯ ವೇಳೆ ಮತ್ತೊಂದು ಬಲಿ ಸಂಭವಿಸಿದ್ದು ಬಾಣಸವಾಡಿಯ ಹೊರವರ್ತುಲ ಮುಖ್ಯರಸ್ತೆಯ ಮದರ್ ವುಡ್ ಆಸ್ಪತ್ರೆಯ ಬಳಿ ಇಂದು ಮುಂಜಾನೆ
ಮೆಟ್ರೋ ಬ್ಯಾರಿಕೇಡ್ ಸ್ವಚ್ಚತಾ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕರೊಬ್ಬರು ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಬಿಹಾರದ ಕಾಟೇಯಾದ ಗುಡ್ಡು ಮಾಂಜಿ(೨೭)ಮೃತಪಟ್ಟ ಕೂಲಿ ಕಾರ್ಮಿಕನಾಗಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಬಾಣಸವಾಡಿಯ ಹೊರವರ್ತುಲ ಮುಖ್ಯರಸ್ತೆಯ ಮದರ್ ವುಡ್ ಆಸ್ಪತ್ರೆಯ ಬಳಿ ಮುಂಜಾನೆ ೪.೨೦ ರ ವೇಳೆ ಮೆಟ್ರೋ ಬ್ಯಾರಿಕೇಡ್ ರಿಪೇರಿ ಹಾಗೂ ಸ್ವಚ್ಚ ಮಾಡಲು ಬ್ಯಾರಿಕೇಡ್ ಅಳವಡಿಸಿಕೊಂಡು ಗುಡ್ಡು ಮಾಂಜಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಹೊರಮಾವು ಅಂಡರ್ ಪಾಸ್ ಕಡೆಯಿಂದ ಹೆಬ್ಬಾಳ ಕಡೆಗೆ ಅತಿವೇಗವಾಗಿ ಬಂದ ಟಾಟಾ ಏಸ್ ವಾಹನ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಗುಡ್ಡು ಮಾಂಜಿ ಅವರಿಗೆ ಗುದ್ದಿದೆ.
ತಲೆ,ಬೆನ್ನು,ಸೊಂಟಕ್ಕೆ ಗಂಭೀರವಾಗಿ ಗಾಯಗೊಂಡ ಗುಡ್ಡು ಮಾಂಜಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿರುವ ಬಾಣಸವಾಡಿ ಸಂಚಾರ ಪೊಲೀಸರು ಟಾಟಾ ಏಸ್ ವಾಹನ ಚಾಲಕನ ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.