ಮೆಟ್ರೋ ಅವಘಡ ತಪ್ಪಿಸಲು ಐಐಎಸ್‌ಸಿ ತಜ್ಞರಿಂದ ವರದಿ

ಬೆಂಗಳೂರು,ಮಾ.೧೩- ಮೆಟ್ರೋ ಕಾಮಗಾರಿ ಮಾರ್ಗಗಳಲ್ಲಿ ಅವಘಡ ಮತ್ತು ಮಾಲಿನ್ಯ ನಿಯಂತ್ರಿಸಲು ಮೆಟ್ರೋ ನಿಗಮ ಐಐಎಸ್‌ಸಿ ತಜ್ಞರಿಂದ ವರದಿ ಪಡೆಯಲು ಮುಂದಾಗಿದೆ.
ಕಳೆದ ಜನವರಿಯಲ್ಲಿ ನಿರ್ಮಾಣ ಹಂತದ ಪಿಲ್ಲರ್ ಕುಸಿದು ತಾಯಿ ಮಗು ಮೃತಪಟ್ಟ ಪ್ರಕರಣ, ಎಂ.ಜಿ.ರಸ್ತೆಯಲ್ಲಿ ಭೂಗತ ಮಾರ್ಗ ಹಾದು ಹೋದ ಸನಿಹವೇ ಉಂಟಾದ ಭೂಕುಸಿತ, ಬ್ಯಾರಿಕೇಡ್‌ಗೆ ಕಾರಿನ ಡಿಕ್ಕಿ ಹಾಗೂ ಈಚೆಗೆ ಮೆಟ್ರೋ ಮಾರ್ಗದ ಮೇಲಿಂದ ಕಬ್ಬಿಣದ ರಾಡ್‌ಗಳು ಕಾರಿನ ಮೇಲೆ ಬಿದ್ದ ಪ್ರಕರಣದಿಂದ ಮೆಟ್ರೋ ಸುರಕ್ಷತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ಹೆಚ್ಚಿಸಲು ತಜ್ಞರಿಂದ ವರದಿ ಪಡೆಯಲು ಮೆಟ್ರೋ ನಿಗಮ ನಿರ್ಧರಿಸಿದೆ.
ವರದಿಯ ಸಂಬಂಧ ರಚನೆಯಾಗಿರುವ ಮೂವರು ತಜ್ಞರ ತಂಡ ನಾಲ್ಕೈದು ದಿನಗಳಲ್ಲಿ ಪರಿಶೀಲನೆ ಆರಂಭಿಸಲಿದೆ.
ಐಐಎಸ್‌ಸಿಯು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜೆ.ಎಂ.ಚಂದ್ರಕಿಶನ್, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಸಹ ಪ್ರಾಧ್ಯಾಪಕ ಲಕ್ಷ್ಮೇನಾರಾಯಣ ರಾವ್ ಮತ್ತು ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಹಿಂದೆ ಕರ್ತವ್ಯದಲ್ಲಿದ್ದ ರಮೇಶ್ ಬಾಬು ನಾರಾಯಣಪ್ಪ ಅವರನ್ನು ಒಳಗೊಂಡ ತಂಡವನ್ನು ನಿಯೋಜಿಸಿದೆ.
ಮುಂದಿನ ಎರಡೂವರೆ ತಿಂಗಳಲ್ಲಿ ಸುರಕ್ಷತೆ ಕುರಿತ ವರದಿ ನೀಡುವಂತೆ ಕೋರಿದ್ದು, ಈ ವರದಿ ಆಧರಿಸಿ ಬದಲಾವಣೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ತಂಡವು ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್‌ವರೆಗಿನ ನಿರ್ಮಾಣ ಹಂತದಲ್ಲಿರುವ ಹೊರ ವರ್ತುಲ ರಸ್ತೆ ಮಾರ್ಗ (ಒಆರ್‌ಆರ್), ಕೆ.ಆರ್.ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ವಿಮಾನ ನಿಲ್ದಾಣ ಮಾರ್ಗ ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಸುರಂಗ ಮಾರ್ಗವನ್ನು ತಂಡ ಪರಿಶೀಲಿಸಲಿದೆ.
ಮಾಲಿನ್ಯ ನಿಯಂತ್ರಣ:
ಇದಲ್ಲದೆ ಮೆಟ್ರೋ ಕಾಮಗಾರಿಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಅಧ್ಯಯನ ನಡೆಸಲಾಗುವುದು. ಸ್ಥಳದ ಸುತ್ತಮುತ್ತಲಿನ ಶಾಲಾ ಕಾಲೇಜು, ಆಸ್ಪತ್ರೆಗಳಿಗೆ ಉಂಟಾಗುತ್ತಿರುವ ತೊಂದರೆ, ರಾತ್ರಿ ವೇಳೆಯ ಕೆಲಸದಿಂದ ಎದುರಾಗುವ ಸಮಸ್ಯೆಗಳ ಬಗ್ಗೆಯೂ ವರದಿ ನೀಡಲಿದ್ದೇವೆ ಎಂದು ತಜ್ಞರು ತಿಳಿಸಿದ್ದಾರೆ.
ಕೆಐಎ- ಸೆಂಟ್ರಲ್ ಸಿಲ್ಕ್ ಬೋರ್ಡ್‌ನ ೨ಎ ಮತ್ತು ೨ಬಿ ಮೆಟ್ರೋ ಹಂತಗಳಲ್ಲಿ ೧೨ ಮೀಟರ್‌ಗಿಂತ ಎತ್ತರದ ಪಿಲ್ಲರ್ ನಿರ್ಮಾಣ ಸ್ಥಗಿತಗೊಳಿಸಲಾಗಿದೆ. ಜತೆಗೆ ಪಿಲ್ಲರ್ ಚೌಕಟ್ಟುಗಳ ಬಲವರ್ಧನೆಗೆ ಕ್ರಮ ವಹಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ
ಏನೇನು ತಪಾಸಣೆ:
ಸದ್ಯ ತಂಡ ಬಿಎಂಆರ್‌ಸಿಎಲ್ ಗುತ್ತಿಗೆದಾರರಿಗೆ ಒದಗಿಸಿದ ಮಾರ್ಗಸೂಚಿ ದಾಖಲೆಗಳ ಅಧ್ಯಯನ ಕೈಗೊಂಡಿದೆ. ಮೊದಲು ಯಾವ ಮಾರ್ಗದ ತಪಾಸಣೆ ಆರಂಭಿಸಬೇಕು ಎಂಬುದನ್ನು ನಿರ್ಧರಿಸಿ ಬರುವ ಶುಕ್ರವಾರದಿಂದ ಸ್ಥಳ ಪರಿಶೀಲನೆ ನಡೆಸಲಿದೆ. ಮೆಟ್ರೊ ಪಿಲ್ಲರ್, ವಯಡಕ್ಟ್ ಅಳವಡಿಕೆ ಸೇರಿ ಕಾಮಗಾರಿ ನಡೆವ ಸ್ಥಳಗಳಲ್ಲಿ ಗುತ್ತಿಗೆದಾರರು ಮಾರ್ಗಸೂಚಿಯಂತೆ ಬ್ಯಾರಿಕೇಡ್ ಇಟ್ಟಿದ್ದಾರೊ ಇಲ್ಲವೊ? ಸುರಕ್ಷತಾ ಫಲಕಗಳು ಅಳವಡಿಕೆ ಆಗಿದೆಯೆ? ಎಂಬುದನ್ನು ತಂಡ ಪರಿಶೀಲಿಸಲಿದೆ ಎಂದು ಪ್ರೊ.ಚಂದ್ರಕಿಶನ್ ತಿಳಿಸಿದರು. ಕಿರಿದಾದ ಮಾರ್ಗದಲ್ಲಿ ಸಾರ್ವಜನಿಕ ಸಂಚಾರಕ್ಕೆ ಉಂಟಾಗುತ್ತಿರುವ ಸಮಸ್ಯೆ, ಜಂಕ್ಷನ್‌ಗಳಲ್ಲಿ ಜನರ ಓಡಾಟವನ್ನು ಗಮನಿಸಲಾಗುವುದು. ಸ್ಥಳ ಪರಿಶೀಲನೆ ವೇಳೆ ಬಿಎಂಆರ್‌ಸಿಎಲ್ ಪ್ರತಿ ರೀಚ್‌ನ ಸೈಟ್ ಎಂಜಿನಿಯರ್‌ಗಳು ಇರಲಿದ್ದು, ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಬದಲಾವಣೆ ಕುರಿತು ಅವರಿಗೆ ಸೂಕ್ತ ಸೂಚನೆ ನೀಡಲಾಗುವುದು ಎಂದು ಹೇಳಿದರು.
೩೮ ಮಂದಿ ಬಲಿ:
ಮೆಟ್ರೊ ನಿರ್ಮಾಣದ ಆರಂಭದಿಂದ ಈವರೆಗೆ ೩೮ ಜನ ಮೃತಪಟ್ಟಿದ್ದು, ೧೨ ಜನ ಗಾಯಗೊಂಡಿದ್ದಾರೆ. ಇವರಿಗೆ ೩.೧೫ ಕೋಟಿ ಪರಿಹಾರ ನೀಡಲಾಗಿದೆ. ಗುತ್ತಿಗೆದಾರರಿಗೆ ೧.೭೭ ಕೋಟಿ ದಂಡ ವಿಧಿಸಲಾಗಿದ್ದು, ಮೂವರು ಎಂಜಿನಿಯರ್‌ಗಳು ಅಮಾನತು ಆಗಿದ್ದಾರೆ ಎಂದು ಸರ್ಕಾರ ಕಳೆದ ಅಧಿವೇಶನದಲ್ಲಿ ತಿಳಿಸಿತ್ತು