ಮೆಟ್ರೋದಲ್ಲಿ ರೈತನಿಗೆ ಅವಮಾನ ವಿವಾದಕ್ಕೆಡೆ

ಬೆಂಗಳೂರು, ಫೆ.೨೬-ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯಾದ ನಮ್ಮ ಮೆಟ್ರೋದಲ್ಲಿ ರೈತನಿಗೆ ಅವಮಾನ ಮಾಡಲಾಗಿದ್ದು, ಆತ ಕೊಳಕು ಬಟ್ಟೆ ಹಾಕಿದ್ದಾನೆ ಎಂದು ಸಿಬ್ಬಂದಿ ತಡೆದು ನಿಲ್ಲಿಸಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ.
ಬಟ್ಟೆ ಸ್ವಚ್ಛವಾಗಿಲ್ಲ ಎಂದು ವ್ಯಕ್ತಿಯೊಬ್ಬರಿಗೆ ಮೆಟ್ರೋ ಸಿಬ್ಬಂದಿ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿದ್ದು, ಈ ಘಟನೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಬಿಎಂಆರ್ ಸಿಎಲ್ ಸಿಬ್ಬಂದಿಯ ಅತಿರೇಕದ ವರ್ತನೆಯ ವೀಡಿಯೋ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಬಳಿಕ ಸಹಪ್ರಯಾಣಿಕರು ಸಿಬ್ಬಂದಿ ಬಗ್ಗೆ ತಲೆಕೆಡಿಸಿಕೊಳ್ಳದೆ, ವ್ಯಕ್ತಿಯನ್ನು ಮೆಟ್ರೋದಲ್ಲಿ ಕರೆದೊಯ್ದಿದ್ದಾರೆ. ಅಲ್ಲದೇ ಮೆಟ್ರೋ ಸಿಬ್ಬಂದಿ ವಿರುದ್ಧ ಸಹಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋವನ್ನು ಜನ ಬಿಎಂಆರ್ ಸಿಎಲ್‌ಗೆ ಟ್ಯಾಗ್ ಮಾಡಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ದೇಶದ ಬೆನ್ನೆಲುಬಾದ ರೈತನಿಗೆ ಬೆಂಗಳೂರು ಮೆಟ್ರೋದಲ್ಲಿ ಅವಮಾನವಾಗಿದೆ ಮೆಟ್ರೋದಲ್ಲಿ ಟಿಪ್ ಟಾಪ್ ಆಗಿ ಡ್ರೆಸ್ ಹಾಕಿಕೊಂಡರೆ ಮಾತ್ರ ಮೆಟ್ರೋದೊಳಗೆ ಪ್ರವೇಶ ಸಿಗುವುದೇ.
ಹಾಗಾದರೆ ಬಡವರಿಗೆ ಮೆಟ್ರೋ ಪ್ರಯಾಣ ಸೇವೆ ಸಿಗಲ್ವಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ, ಮೆಟ್ರೋ ಎಂದರೆ ವಿಐಪಿಗಳಿಗೆ ಮಾತ್ರ ಇರುವುದಾ. ಒಳ್ಳೆ ಬಟ್ಟೆ ಹಾಕೊಂಡು ಬಂದರೆ. ನೀವೇನೂ ಉಚಿತವಾಗಿ ಒಳಗೆ ಬಿಡುತ್ತೀರಾ, ಅವರು ಹಣ ಕೊಟ್ಟು ಹೋಗುತ್ತಿದ್ದಾರೆ ಎಂದು ಸಿಬ್ಬಂದಿಗಳಿಗೆ ಅಲ್ಲಿದ್ದ ಸಾರ್ವಜನಿಕರು ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಮಾನತು..!
ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ಒಳಗೆ ಬಿಡದ ಮೆಟ್ರೋ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ನ ನಿರ್ದೇಶಕ ಮಹೇಶ್ವರನ್ ಹೇಳಿದ್ದಾರೆ.
ಘಟನೆಗೆ ಕಾರಣವಾದ ಸೆಕ್ಯುರಿಟಿ ಸೂಪರ್ ವೈಸರ್ ಅಮಾನತು ಮಾಡಿದ್ದು, ಈ ಬಗ್ಗೆ ನಾವು ಸಂಪೂರ್ಣ ತನಿಖೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.