ಬೆಂಗಳೂರು,ಮಾ.೨೫- ವೈಟ್‌ಫೀಲ್ಡ್‌ನಿಂದ ಕೆಆರ್‌ಪುರಂನಿಂದ ಮೆಟ್ರೊ ರೈಲು ಮಾರ್ಗವನ್ನು ಪ್ರಧಾನಿ ಮೋದಿ ಅವರು ಇಂದು ಉದ್ಘಾಟಿಸಿ ಮೆಟ್ರೊ ರೈಲಿನಲ್ಲಿ ವೈಟ್‌ಫೀಲ್ಡ್‌ನಿಂದ ಕೆಆರ್‌ಪುರಂವರೆಗೂ ಪ್ರಯಾಣ ಮಾಡಿದರು.
ಪ್ರಧಾನಿ ನರೇಂದ್ರಮೋದಿ ಅವರ ಜತೆ ಈ ಮೆಟ್ರೊ ರೈಲಿನಲ್ಲಿ ರಾಜ್ಯಪಾಲ ಥಾವರ್‌ಚಂದ್‌ಗೆಲ್ಹೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಲಾ ಮಕ್ಕಳು, ಮೆಟ್ರೊ ಸಿಬ್ಬಂದಿ ಸಹ ಪ್ರಯಾಣ ಮಾಡಿದ್ದು ವಿಶೇಷವಾಗಿತ್ತು. ಪ್ರಧಾನಿ ಮೋದಿ ಅವರು ಮೆಟ್ರೊ ಸಿಬ್ಬಂದಿಯ ಜತೆ ಕುಳಿತು ಅವರ ಜತೆ ಸಂವಾದ ಸಹ ನಡೆಸಿ ಅವರ ಕಷ್ಟ ಸುಖಗಳನ್ನು ಆಲಿಸಿ ಮೆಟ್ರೊ ರೈಲಿನ ಓಡಾಟ, ವ್ಯವಸ್ಥೆಯ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಂಡರು. ಕೆಆರ್‌ಪುರಂವರೆಗೂ ಅದೇ ರೈಲಿನಲ್ಲಿ ಮತ್ತೆ ವೈಟ್‌ಫೀಲ್ಡ್ ನಿಲ್ದಾಣಕ್ಕೆ ಆಗಮಿಸಿದರು.
ವೈಟ್‌ಫೀಲ್ಡ್‌ನಿಂದ ಕೆಆರ್‌ಪುರಂವರೆಗಿನ ೧೩.೭೧ ಕಿ.ಮೀ ರೈಲು ಮಾರ್ಗವನ್ನು ೪,೨೪೯ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಈ ಮಾರ್ಗದಲ್ಲಿ ೧೨ ರೈಲು ನಿಲ್ದಾಣಗಳು ಬರಲಿವೆ. ಈ ವಿಭಾಗವು ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಕಾರ್ಯಾಚರಣೆಯಲ್ಲಿರುವ ನೇರಳೆ ಮಾರ್ಗದ ವಿಸ್ತರಣೆಯಾಗಿದ್ದು, ಐಟಿ ಉದ್ಯೋಗಿಗಳೂ ಸೇರಿದಂತೆ ಈ ಭಾಗದಲ್ಲಿರುವ ಹಲವು ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ೫ ರಿಂದ ೬ ಲಕ್ಷ ಬೆಂಗಳೂರಿಗರಿಗೆ ಅನುಕೂಲವಾಗಲಿದ್ದು, ಈ ಭಾಗದ ರಸ್ತೆಯಲ್ಲಿನ ವಾಹನ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ.
ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ಮೆಟ್ರೊ ಲೈನ್ ನಿಲ್ದಾಣವನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಮೆಟ್ರೊ ನಿಲ್ದಾಣದ ರಸ್ತೆವರೆಗೆ ನೂರಾರು ಮಂದಿ ಸೇರಿದ್ದು, ಎಲ್ಲರೂ ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗಿದರು, ಮೋದಿ ಪರ ಜೈಕಾರಗಳು ಮುಗಿಲು ಮುಟ್ಟಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರೇ ಸೇರಿದ್ದು ಗಮನ ಸೆಳೆಯಿತು.