ಮೆಟ್ರೋಗೆ ಮುಗಿಬಿದ್ದ ಮಂದಿ

ಬೆಂಗಳೂರು,ಸೆ.೧೧-ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿದ ಬೆಂಗಳೂರು ಬಂದ್‌ನಿಂದಾಗಿ ಖಾಸಗಿ ವಾಹನಗಳು ಸಿಗದೇ ಮೆಟ್ರೋ ಕಡೆಗೆ ಪ್ರಯಾಣಿಕರು ಮುಖ ಮಾಡಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಇದರಿಂದಾಗಿ ಭಾರಿ ಪ್ರಯಾಣಿಕರ ಸಂಖ್ಯೆ ಕಂಡುಬರುತ್ತಿದೆ. ಇದಕ್ಕೆ ಪೂರಕವಾಗಿ ಬಿಎಂಆರ್‌ಸಿಎಲ್ ಕೂಡಾ ಸ್ಪಂದಿಸಿದ್ದು, ಎರಡು ರೈಲುಗಳ ಪ್ರಯಾಣದ ಅವಧಿಯನ್ನು ಮುಂಜಾನೆಯಿಂದಲೇ ಐದು ನಿಮಿಷಕ್ಕೆ ಇಳಿಸಿದೆ. ಅವಶ್ಯಬಿದ್ದರೆ ಇನ್ನಷ್ಟು ರೈಲುಗಳನ್ನು ಓಡಿಸಲು ವ್ಯವಸ್ಥೆ ಮಾಡಿಕೊಂಡಿದೆ.
ಸಾಮಾನ್ಯವಾಗಿ ಮುಂಜಾನೆ ಹೊತ್ತು ಹತ್ತು ನಿಮಿಷಕ್ಕೊಂದು ರೈಲು ಓಡುತ್ತದೆ. ಪೀಕ್ ಅವರ್‌ನಲ್ಲಿ ಮಾತ್ರ ಐದು ನಿಮಿಷಕ್ಕೊಂದು ಮೆಟ್ರೋ ಓಡುತ್ತದೆ. ಆದರೆ, ಇಂದು ಬೆಳಗ್ಗಿನಿಂದಲೇ ಐದು ನಿಮಿಷಕ್ಕೊಂದು ರೈಲು ಓಡಾಟವಿದೆ.
ಮೆಟ್ರೋ ನಿಲ್ದಾಣದಲ್ಲಿ ಕ್ಯೂ:
ಮೆಟ್ರೋ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದೆ. ಬೆಳಗ್ಗೆ ೮ ರಿಂದ ೧೧.೩೦ರ ಪೀಕ್ ಅವರ್‌ನಲ್ಲಿ ಪ್ರತಿ ೫ ನಿಮಿಷಕ್ಕೆ ಒಂದು ನಮ್ಮ ಮೆಟ್ರೋ ರೈಲು ಓಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಅಲ್ಲದೇ ಸಂಜೆಯ ಪೀಕ್ ಅವರ್ ಅನ್ನು ಸಹ ೫ ರಿಂದ ೮ ಗಂಟೆಯ ತನಕ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಪೀಕ್ ಅವರ್ ಅಲ್ಲದ ಸಮಯಗಳಲ್ಲಿ ನಮ್ಮ ಮೆಟ್ರೋ ರೈಲುಗಳು ೧೦ ನಿಮಿಷದ ಬದಲಾಗಿ ೬ ರಿಂದ ೮ ನಿಮಿಷದಲ್ಲಿ ಸಂಚಾರ ನಡೆಸಲಿವೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಕಿಕ್ಕಿರಿದ ಜನಸಂದಣೆ:
ಬಂದ್‌ನಿಂದಾಗಿ ಬಹುತೇಕ ಎಲ್ಲ ಮೆಟ್ರೋ ನಿಲ್ದಾಣಗಳಲಿ ಜನದಟ್ಟಣೆ ಕಂಡುಬಂದಿದೆ. ಹೆಚ್ಚಿನವರು ತಮ್ಮ ಖಾಸಗಿ ವಾಹನಗಳನ್ನು ಮೆಟ್ರೋ ನಿಲ್ದಾಣದವರೆಗೆ ತಂದು ಅಲ್ಲಿಂದ ಮೆಟ್ರೋ ಹತ್ತುತ್ತಿದ್ದಾರೆ. ಹೀಗಾಗಿ ಎಂದಿಗಿಂತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಿಲ್ದಾಣಗಳಲ್ಲಿ ಟೋಕನ್ ಪಡೆಯಲು, ಒಳ ಪ್ರವೇಶಿಸಲು, ರೈಲು ಹತ್ತಲು ಎಲ್ಲ ಕಡೆ ಕ್ಯೂ ಕಂಡುಬಂದಿದೆ.