ಮೆಟ್ರೊ 3ನೇ ಹಂತದ ಯೋಜನೆ ಶೀಘ್ರ ದೆಹಲಿಗೆ:ಡಿಕೆಶಿ

ಬೆಂಗಳೂರು, ಜೂ.6-ಮೆಟ್ರೊ ಮೂರನೇ ಹಂತದ ಯೋಜನೆಗೆ ಅನುಮತಿ ಪಡೆಯಲು ದೆಹಲಿಗೆ ತೆರಳಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ
ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿ ಮೆಟ್ರೋ ರೈಲು ನಂತರ ಬೆಂಗಳೂರಿನ ಮೆಟ್ರೊ ರೈಲು ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಸಂಪರ್ಕವಾಗಿದ್ದು, ವಿಶ್ವದರ್ಜೆ ಮಟ್ಟದ ಸೇವೆ ನೀಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಯೋಗದಲ್ಲಿ ನಮ್ಮ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಮೆಟ್ರೋ ರೈಲು ನಿಗಮದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಹಂತದ ಮೆಟ್ರೊ ಯೋಜನೆ ಕುರಿತಂತೆ ಕೇಂದ್ರ ಸರ್ಕಾರ ಕೇಳಿರುವ ದಾಖಲೆಗಳನ್ನು ಒದಗಿಸಲಾಗಿದೆ ಎಂದರು.
48 ಕೋಟಿ ಆದಾಯದಲ್ಲಿ 42 ಕೋಟಿಯಷ್ಟು ಹಣ ಕಾರ್ಯನಿರ್ವಹಣೆಗೆ ಖರ್ಚಾಗುತ್ತಿದೆ. ಬಂಡವಾಳ ಹೂಡಿಕೆ ಹೊರತಾಗಿ ಕೇವಲ 6 ಕೋಟಿ ಲಾಭದಲ್ಲಿದೆ.ಮೆಟ್ರೊ ಕಾರ್ಯವೈಖರಿ ಪರಿಶೀಲನೆ ಮಾಡಿದ್ದೇನೆ. ಮೆಟ್ರೋ ಕಾರ್ಯನಿರ್ವಹಣೆ, ಮುಂದಿನ ಕಾರ್ಯಯೋಜನೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಪ್ರಯಾಣಿಕರ ಹೊರತಾಗಿ ಇತರೆ ಮೂಲಗಳಿಂದ ಆದಾಯ ಗಳಿಸುವ ಕುರಿತು ನಾನು ಕೆಲವು ಸಲಹೆ ನೀಡಿದ್ದೇನೆ. ಜಾಹೀರಾತು ಬಗ್ಗೆ ಇರುವ ನಿರ್ಬಂಧವನ್ನು ಸರಿಪಡಿಸುತ್ತೇವೆ. ಇದರ ಜತೆಗೆ ಅವರಿಗೆ ಸಬ್ಸಿಡಿಯಲ್ಲಿ ಸಿಗುತ್ತಿರುವ ವಿದ್ಯುತ್ ಅನ್ನು ಗ್ರೂಪ್ ಕ್ಯಾಪಿಟಿವ್ ಮೂಲಕ ಮತ್ತಷ್ಟು ಕಡಿಮೆ ದರಕ್ಕೆ ಪಡೆಯುವ ಸಲಹೆ ನೀಡಿದ್ದೇನೆ ಎಂದು ವಿವರಿಸಿದರು.
3ಎ ಹಂತದ ಯೋಜನೆಯಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಸಮೀಕ್ಷೆ ನಡೆಯುತ್ತಿದೆ. ಮುಂದೆ ಮೆಟ್ರೊ ರೈಲು ಎಲ್ಲೆಲ್ಲಿ ವಿಸ್ತರಣೆ ಮಾಡಬಹುದು ಎಂದು ಸಮೀಕ್ಷೆ ಮಾಡಲು ಸೂಚಿಸಿದ್ದೇನೆ ಎಂದರು.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಪ್ರಶ್ನೆಗೆ, ಬೈಯ್ಯಪ್ಪನಹಳ್ಳಿ -ಕೆ.ಆರ್ ಪುರಂ ಮೆಟ್ರೋ ಜುಲೈ ವೇಳೆಗೆ, ಕೆಂಗೇರಿ ಹಾಗೂ ಚಲಘಟ್ಟ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ, ನಾಗಸಂದ್ರ ಹಾಗೂ ಮಾದವಾರ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಸಿದ್ಧವಾಗಬಹುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ನೂತನ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ ರಸ್ತೆ ಮಾರ್ಗ ಅಕ್ಟೋಬರ್ ನವೆಂಬರ್ ವೇಳೆಗೆ ಆಗಲಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಮಾರ್ಗ 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರಂವರೆಗಿನ ಮಾರ್ಗ ಕೂಡ ಇದೇ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಮೆಟ್ರೋ ಕಾಮಗಾರಿ ವಿಳಂಬ ಕುರಿತು ಸಭೆಯಲ್ಲಿ ಅಧಿಕಾರಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ರಾತ್ರಿ ವೇಳೆ ಈ ಕಾಮಗಾರಿಗಳು ನಡೆಯುತ್ತಿವೆ. ಹಗಲಲ್ಲಿ ಸಿಮೆಂಟ್, ಸಾಮಗ್ರಿ ತಲುಪಿಸಲು ಆಗುತ್ತಿಲ್ಲ. ಈ ವಿಚಾರವಾಗಿ ಪೊಲೀಸರ ಜತೆ ಸಭೆ ಮಾಡಬೇಕು. ಅದನ್ನು ಮಾಡುತ್ತೇನೆ. ಈ ವಿಚಾರದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.