ಮೆಟ್ರೊ ಪ್ರಯಾಣಿಕರಿಗೆ ನಾಳೆಯಿಂದ ಎಲೆಕ್ಟ್ರಿಕ್ ಬಸ್ ಸೇವೆ

ಬೆಂಗಳೂರು,ಸೆ.೨೫- ನಗರದಲ್ಲಿ ಹೆಚ್ಚಿನ ವಾಹನಗಳಿಂದ ಉಗುಳುವ ಹೊಗೆಯಿಂದ ಬೇಸತ್ತ ಜನರಿಗೆ ಬಿಎಂಟಿಸಿ ಸಿಹಿ ಸುದ್ದಿಯನ್ನು ನೀಡಿದೆ. ನಾಳೆಯಿಂದ ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ಬಸ್ ಲಭ್ಯವಾಗಲಿದೆ.
ಬೆಂಗಳೂರಿನ ಮೊದಲ ಎಲೆಕ್ಟ್ರಿಕ್ ಬಸ್ ಇದಾಗಿದ್ದು, ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ನಿಯೋಜಿಸಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಎನ್‌ಟಿಪಿಸಿ ಮತ್ತು ಜೆಬಿಎಂ ಆಟೊ ಕಂಪನಿಗಳು ಜಂಟಿಯಾಗಿ ೯ ಮೀ. ಉದ್ದದ ೯೦ ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸುವ ಜವಾಬ್ದಾರಿ ಹೊತ್ತುಕೊಂಡಿವೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ೯ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಕಳೆದ ವರ್ಷ ಫೆಬ್ರವರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಈ ಎಲೆಕ್ಟ್ರಿಕ್ ಬಸ್‌ನಲ್ಲಿ ೩೦ ರಿಂದ ೩೫ ಪ್ರಯಾಣಿಕರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಬಸ್‌ಗಳನ್ನು ಮುಖ್ಯವಾಗಿ ಮೆಟ್ರೊ ನಿಲ್ದಾಣದಲ್ಲಿ ಬರುವ ಪ್ರಯಾಣಿಕರಿಗೆ ಇತರ ಪ್ರದೇಶಗಳಿಗೆ ಪ್ರಯಾಣ ಮಾಡಲು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ರಸ್ತೆ, ಬೈಯಪ್ಪನ ಹಳ್ಳಿ, ಬನಶಂಕರಿ ಮತ್ತು ಇಂದಿರಾ ನಗರ ಮೆಟ್ರೊನಿಲ್ದಾಣದಲ್ಲಿ ಈ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ.
ನಾಳೆಯಿಂದ ಸೇವೆ ಆರಂಭಿಸುವ ಮೊದಲ ಎಲೆಕ್ಟ್ರಿಕ್ ಬಸ್ ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಸ್‌ಗಳನ್ನು ಜೂನ್ ತಿಂಗಳಿನಿಂದಲೇ ಹಂತ ಹಂತವಾಗಿ ಮೆಟ್ರೊ ನಿಲ್ದಾಣದಲ್ಲಿ ನಿಯೋಜಿಸಬೇಕಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿತ್ತು.