ಮೆಟ್ರೊ ದುರಂತ: ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 10, ಬಿಎಂಆರ್ ಸಿಎಲ್ ನಿಂದ 20 ಲಕ್ಷ ಪರಿಹಾರ

ಬೆಂಗಳೂರು, ಜ.10-ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಹಠಾತ್ ಕುಸಿದುಬಿದ್ದ ಪರಿಣಾಮ ಮೃತಪಟ್ಟ ತಾಯಿ ಹಾಗೂ ಎರಡು ವರ್ಷದ ಮಗುವಿನ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಹಾಗೂ ಬಿಎಂಆರ್ ಸಿಎಲ್ ನಿಂದ 20 ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿದೆ.

ಎಚ್‍ಬಿಆರ್ ಲೇಔಟ್ ಬಳಿ ಮೆಟ್ರೋ ಕಾಮಗಾರಿ ವೇಳೆ ಪಿಲ್ಲರ್‌ಗೆ ನಿಲ್ಲಿಸಿದಂತಹ ಕಬ್ಬಿಣದ ರಾಡ್‌ಗಳು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮಗುವಿನ ಮೇಲೆ ಬಿದ್ದಿತ್ತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ವಿನಿ (35) ಹಾಗೂ ವಿಹಾನ್ (2 ವರ್ಷ 6 ತಿಂಗಳು) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಂದೆ ಹಾಗೂ ಮಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್, ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಮೃತರ ಕುಟುಂಬಸ್ಥರಿಗೆ 20 ಲಕ್ಷ ಪರಿಹಾರ ಪ್ರಕಟಿಸಿದರು.

ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಲಾಗುತ್ತದೆ. ತಾಂತ್ರಿಕ ದೋಷ ಇಲ್ಲವೆ ಕಾರ್ಮಿಕರ ತಪ್ಪಿನಿಂದಾಗಿ ಅವಘಡ ಎಂದು ಕಂಡುಬಂದಲ್ಲಿ ಮುಂದೆ ಇಂತಹ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಖುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಧಾರವಾಡದಲ್ಲಿ ಸುದ್ಸಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೃತರ ಕುಟುಂಬ ಸದಸ್ಯರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದರು.

ಘಟನೆ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುವುದು ಅವರು ಎಂದು ಹೇಳಿದರು.