ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪನಾಗ್ ಭೇಟಿ

ಸಂಜೆವಾಣಿ ವಾರ್ತೆ
ಹನೂರು ಫೆ 19 :- ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪನಾಗ್ ರವರು ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಊಟದ ವ್ಯವಸ್ಥೆ, ಸ್ವಚ್ಛತೆ ಹಾಗೂ ಹೆಚ್ಚಿವರಿ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು.
ಇದೇವೇಳೆ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಹಾಗೂ ಮಕ್ಕಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಕುರಿತು ಖುದ್ದು ಪರಿಶೀಲಸಿದರು. ಮಕ್ಕಳ ಕೊಠಡಿಗಳಿಗೆ ಭೇಟಿ ನೀಡಿ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಮಕ್ಕಳೊಡನೆ ಬೆರೆತು ಅವರಿಂದ ವಿದ್ಯಾರ್ಥಿ ನಿಲಯದಲ್ಲಿ ನೀಡುತ್ತಿರುವ ಆಹಾರ, ಸ್ವಚ್ಛತೆ, ಆಟ ಪಾಠಗಳ ಬಗ್ಗೆ ಮಾಹಿತಿ ಪಡೆದರು.
ನಿಲಯದಲ್ಲಿ ಸೊಳ್ಳೆ ಕಾಟವಿದೆಯೇ ಎಂದು ಮಕ್ಕಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಸಿದ ಮಕ್ಕಳು ನಿಲಯದಲ್ಲಿ ಸೊಳ್ಳೆಗಳ ಕಾಟವಿಲ್ಲ ಹಾಗೂ ಸರಿಯಾದ ಸಮಯಕ್ಕೆ ಊಟ ತಿಂಡಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಚೆನ್ನಾಗಿ ಓದಿಕೊಳ್ಳಬೇಕು ನಿಲಯಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಭರವಸೆ ನೀಡಿದರು.
ಶೌಚಾಗೃಹಕ್ಕೆ ಭೇಟಿ ನೀಡಿದ ಅವರು ಅಲ್ಲಿ ನೀರು ಪೆÇೀಲಾಗುತ್ತಿರುವುದು ಹಾಗೂ ಗಲೀಜು ಕಂಡು ಗರಂ ಆದರೂ ಮತ್ತೊಂದು ಭಾಗದಲ್ಲಿ ಇರುವ ಶೌಚಾಲಯವನ್ನು ಬಳಕೆ ಮಾಡದಿರುವ ಬಗ್ಗೆ ಪ್ರಶ್ನಿಸಿದ ಅವರು ಸ್ಥಳದಲ್ಲಿದ್ದ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಡುಗೆ ಕೋಣೆಗೆ ಭೇಟಿ ನೀಡಿ ಸಾಂಬಾರ್ ರುಚಿ ನೋಡಿದರು. ನಿಲಯ ಪಾಲಕರ ಕೊಠಡಿಗೆ ತೆರಳಿ ವಿದ್ಯಾರ್ಥಿ ನಿಲಯಕ್ಕೆ ಸರಬರಾಜಾಗುವ ಸಾಮಗ್ರಿಗಳ ದಾಸ್ತಾನು ಪುಸ್ತಕ ಪಡೆದು ಪರಿಶೀಲಿಸಿದರು.
ಬಳಿಕ ಮಕ್ಕಳಿಗೆ ಶುಚಿಯಾದ ಗುಣಮಟ್ಟದ ಆಹಾರ ನೀಡುವಂತೆ ನಿಲಯ ಪಾಲಕರಿಗೆ ತಾಕಿತು ಮಾಡಿದರು. ಹಾಗೂ ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ಇದ್ದು ಊಟದಲ್ಲಿ ಹೆಚ್ಚು ಸೊಪ್ಪು ಬಳಸುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಈ ವಿದ್ಯಾರ್ಥಿ ನಿಲಯದ ಮೇಲೆ 1.60 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡದ ಮುಂದುವರೆದ ಕಾಮಗಾರಿಯನ್ನು ಪರಿಶೀಲಿಸಿದರು. ಈ ವೇಳೆ ಅಳವಡಿಸಿರುವ ಸೋಲಾರ್ ಪ್ಲೇಟ್ಗಳ ಕೆಳಗೆ ಅಶುಚಿತ್ವ ಕಂಡು ಕಾಮಗಾರಿ ನಡೆಸಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ವಿದ್ಯಾರ್ಥಿ ನಿಲಯದ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸರಿಯಾಗಿರುವ ಬಗ್ಗೆ ಕಂಡುಬಂದಿದ್ದು ಏನಾದರೂ ಲೋಪದೋಷ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹಾಗೂ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಸಣ್ಣಪುಟ್ಟ ನ್ಯೂನತೆ ಹೊರತುಪಡಿಸಿ ಉಳಿದೆಲ್ಲ ಸರಿಯಾಗಿ ಇದೆ ಅವುಗಳನ್ನು ಸರಿಪಡಿಸಿ ಬಂದರೆ ಮಾತ್ರ ಕಾಮಗಾರಿಯ ಬಿಲ್ ಪಾಸ್ ಮಾಡುತ್ತೇನೆ ಎಂದು ತಿಳಿಸಿದರು. ಹಾಗೂ ತಾಲೂಕಿನ ಮಣಗಳ್ಳಿ ಮೆಟ್ರಿಕ್ ಪೂರ್ವ ಬಾಲಕಯರ ವಿದ್ಯಾರ್ಥಿ ನಿಲಯದಲ್ಲಿ ರಾತ್ರಿ ವೇಳೆ ನಿಲಯ ಪಾಲಕರಿಲ್ಲದಿರುವ ಬಗ್ಗೆ ಪತ್ರಕರ್ತರು ಗಮನಸೆಳೆದಾಗ ಪರಿಶೀಲಿಸುವುದಾಗಿ ತಿಳಿಸಿದರು.
ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ತಾಲ್ಲೂಕು ಸಹಾಯಕ ನಿರ್ದೇಶಕ ಕೇಶವ ಮೂರ್ತಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕಿ ಮಂಜುಳ, ಎಇಇ ರವಿ ಕುಮಾರ್, ಹನೂರು ಗ್ರೇಡ್-2 ತಹಸೀಲ್ದಾರ್ ಧನಂಜಯ್, ಶಿರಸ್ತೇದಾರ್ ನಾಗೇಂದ್ರ, ಗ್ರಾಮ ಆಡಳಿತಾಧಿಕಾರಿ ಶೇಷಣ್ಣ, ನಿಲಯ ಮೇಲ್ವಿಚಾರಕಿ ಸುಂದ್ರಮ್ಮ ಇನ್ನಿತರರು ಇದ್ದರು.