ಮೆಟ್ಟಿಲು ಬಾವಿ ಕುಸಿತ ಪ್ರಕರಣ: ಮೃತರ ಸಂಖ್ಯೆ ೩೫ಕ್ಕೆ ಏರಿಕೆ

ಇಂದೋರ್ , ಮಾ.೩೧- ಇಂದೋರ್ ದೇವಾಲಯದ ಮೆಟ್ಟಿಲುಬಾವಿ ಕುಸಿದ ಘಟನೆಯಲ್ಲಿ ಮೃತರ ಸಂಖ್ಯೆ ೩೫ಕ್ಕೆ ಏರಿಕೆಯಾಗಿದೆ .
ಒಟ್ಟು ೩೫ ಮಂದಿ ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ಮತ್ತು ೧೪ ಜನರನ್ನು ರಕ್ಷಿಸಲಾಗಿದೆ. ಇಬ್ಬರು ಚಿಕಿತ್ಸೆ ಪಡೆದ ನಂತರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ಇಂದೋರ್ ಜಿಲ್ಲಾಧಿಕಾರಿ ಡಾ.ಟಿ.ಇಳಯರಾಜ ಟಿ. ತಿಳಿಸಿದ್ದಾರೆ.
ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ೧೮ ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯು ಗುರುವಾರ ಸುಮಾರು ೧೨:೩೦ಕ್ಕೆ ಪ್ರಾರಂಭವಾಗಿದ್ದು, ಇನ್ನೂ ಮುಂದುವರೆದಿದೆ. ಮಧ್ಯಪ್ರದೇಶ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಾಜ್ಯ ವಿಪತ್ತು ತುರ್ತು ಮತ್ತು ಪ್ರತಿಕ್ರಿಯೆ ಪಡೆ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಜತೆಗೆ ೭೫ ಸೇನಾ ಸಿಬ್ಬಂದಿಯ ತಂಡ ರಕ್ಷಣೆಯಲ್ಲಿ ತೊಡಗಿದೆ. ರಾಮನವಮಿಯಂದು ಪಟೇಲ್ ನಗರ ಪ್ರದೇಶದ ಬೇಲೇಶ್ವರ ಮಹಾದೇವ ಝೂಲೇಲಾಲ್ ದೇವಸ್ಥಾನದಲ್ಲಿ ಆಯೋಜಿಸಿದ್ದ ಹವನದ ವೇಳೆ ಅವಘಡ ಸಂಭವಿಸಿದೆ. ಕಿಕ್ಕಿರಿದು ಜನ ಸೇರಿದ್ದರಿಂದ ಈ ದುರಂತ ಸಂಭವಿಸಿದೆ. ಘಟನೆ ಕುರಿತು ರಾಜ್ಯ ಸರ್ಕಾರ ತನಿಖೆ ಆದೇಶಿಸಿದೆ.